ಮೈಸೂರು,ಜೂ30(DaijiworldNews/AZM):ಜಿಎಸ್ ಟಿಗೆ ಸಂಬಂಧಪಟ್ಟಂತೆ ಕೇಂದ್ರ ಸರಕಾರವು ಒಂದಷ್ಟು ಸುಧಾರಣೆಗಳನ್ನು ಘೋಷಣೆ ಮಾಡಲಿದೆ.
ರಿಟರ್ನ್ ಫೈಲಿಂಗ್ ವ್ಯವಸ್ಥೆ, ಕ್ಯಾಶ್ ಲೆಡ್ಜರ್ ವ್ಯವಸ್ಥೆ, ಒಂದೇ ಹಂತದಲ್ಲಿ ಮರುಪಾವತಿ-ವಿತರಣಾ ಕಾರ್ಯವಿಧಾನ ಈ ಬಾರಿಯ ಸುಧಾರಣೆಗೆ ತೆರೆದುಕೊಳ್ಳಲಿರುವ ಮಹತ್ವದ ಅಂಶಗಳಾಗಿವೆ. ಉಳಿದಂತೆ ಪರೋಕ್ಷ ತೆರಿಗೆ ವ್ಯವಸ್ಥೆಯನ್ನು ಮತ್ತಷ್ಟು ಸರಳೀಕರಣಗೊಳಿಸುವ ಸುಧಾರಣೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತರಲಿದೆ.
ಜಿಎಸ್ ಟಿ ಜಾರಿಗೊಳಿಸಿದ ದಿನದಿಂದ ವಿಪಕ್ಷಗಳು ಜಿಎಸ್ ಟಿಯಲ್ಲಿನ ಸಂಕೀರ್ಣತೆಗಳನ್ನು ಮುಂದಿಟ್ಟು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದವು.
ಜು.1 ಕ್ಕೆ ಹಣಕಾಸು ಇಲಾಖೆಯ ರಾಜ್ಯ ಸಚಿವರಾದ ಅನುರಾಗ್ ಠಾಕೂರ್ ಹಾಗೂ ಇಲಾಖೆಯ ಇನ್ನಿತರ ಕಾರ್ಯದರ್ಶಿಗಳು, ಉನ್ನತ ಅಧಿಕಾರಿಗಳು ಸುಧಾರಣೆಗಳನ್ನು ಘೋಷಣೆ ಮಾಡಲಿದ್ದಾರೆ.
ಹೊಸ ರಿಟರ್ನ್ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಜು.1 ರಿಂದ ಪ್ರಾಯೋಗಿಕವಾಗಿ ಜಾರಿಗೆ ತರಲಿದ್ದು, ಅಕ್ಟೋಬರ್ ನಿಂದ ಕಡ್ಡಾಯವಾಗಿ ಜಾರಿಯಾಗಲಿದೆ. ಸಣ್ಣ ತೆರಿಗೆದಾರರಿಗೆ ಸಹಜ-ಸುಗಮ ತೆರಿಗೆ ಮರುಪಾವತಿ (ಟ್ಯಾಕ್ಸ್ ರಿಟರ್ನ್ಸ್) ಈ ಬಾರಿಯ ಸುಧಾರಣೆಗಳ ಪಟ್ಟಿಯಲ್ಲಿರುವ ವಿಶೇಷ ಅಂಶವಾಗಿದೆ.
ಜು.1 ಕ್ಕೆ ಜಿಎಸ್ ಟಿ ಜಾರಿಯಾಗಿ ಎರಡು ವರ್ಷಗಳು ಪೂರ್ಣಗೊಳ್ಳಲಿದೆ.