ಬೆಂಗಳೂರು,ಜೂ30(DaijiworldNews/AZM): ಜೆಡಿಎಸ್ ಪಕ್ಷ ಸಂಘಟನೆಗೆ ವರಿಷ್ಠರು ಮುಂದಾಗಿದ್ದು, ರಾಜ್ಯಾದ್ಯಂತ ಪಾದಯಾತ್ರೆ ನಡೆಸಲು ತೀರ್ಮಾನಿಸಿದ್ದಾರೆ. ಈ ಹಿನ್ನಲೆ ನಂಜನಗೂಡಿನಿಂದ ಮೊದಲ ಹಂತದ ಪಾದಯಾತ್ರೆ ಆಗಸ್ಟ್ 20ರಿಂದ ಆರಂಭವಾಗುತ್ತಿದೆ.
ಸಿಎಂ ಎಚ್.ಡಿ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ದೇವೇಗೌಡರು ಮಾಜಿ ಶಾಸಕ ವೈ.ಎಸ್ ವಿ ದತ್ತಾ ಜೊತೆಗೆ ರಾಜ್ಯಾದ್ಯಂತ ಪಾದಯಾತ್ರೆ ನಡೆಸಲಿದ್ದಾರೆ. ಈ ಮೂಲಕ ಪಕ್ಷ ಬಲವರ್ಧನೆ ಮಾಡಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ತಳಮಟ್ಟದಿಂದ ಜೆಡಿಎಸ್ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸುವುದಕ್ಕಾಗಿ ಈ ಪಾದಯಾತ್ರೆ ಮಾಡುತ್ತಿದ್ದೇವೆ. ಇದು ಪಕ್ಷ ಬಲಪಡಿಸುವ ಏಕೈಕ ಉದ್ದೇಶದಿಂದ ನಡೆಸಲಾಗುತ್ತಿದೆ. ಮೈತ್ರಿ ಸರಕಾರಕ್ಕೆ ಧಕ್ಕೆ ತರಲು ಮಾಡುತ್ತಿಲ್ಲ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರು ಸ್ಪಷ್ಟಪಡಿಸಿದ್ದಾರೆ.
ಆಗಸ್ಟ್ 20ರಂದು ದೇವರಾಜ ಅರಸು ಅವರ ಜನ್ಮದಿನ. ಅಂದಿನಿಂದಲೇ ಮೊದಲ ಹಂತದ ಪಾದಯಾತ್ರೆ ಆರಂಭವಾಗಲಿದೆ. ಮೊದಲ ಹಂತದ ಪಾದಾಯಾತ್ರೆ ಕಾವೇರಿಯಿಂದ ತುಂಗಭದ್ರಾವರೆಗೂ ನಡೆಯಲಿದೆ. ಎರಡನೇ ಹಂತದಲ್ಲಿ ತುಂಗಭದ್ರಾದಿಂದ ಮಲಪ್ರಭಾದವರೆಗೆ ಪಾದಯಾತ್ರೆ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.
ವಿಭಿನ್ನ ಹೆಸರಿನಲ್ಲಿ ಪಾದಯಾತ್ರೆ ಮಾಡಲಾಗುತ್ತಿದೆ. 'ವಿಚಾರ, ವಿಕಾಸ ಮತ್ತು ವಿಶ್ವಾಸ' ಎಂಬ ಮೂರು ಪರಿಕಲ್ಪನೆಗಳ ಜೊತೆಗೆ ನಡೆಸುವ ಪಾದಯಾತ್ರೆ ಇದಾಗಿದೆ. ಪ್ರಾದೇಶಿಕ ಹಿತಾಸಕ್ತಿಗಾಗಿ ಬಲಿಷ್ಠ ಪ್ರಾದೇಶಿಕ ಪಕ್ಷ ಕಟ್ಟಬೇಕಿದೆ. ಈ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.