ನವದೆಹಲಿ, ಅ. 11 (DaijiworldNews/AK): ದೇಶದ ಕೃಷಿ ವ್ಯವಸ್ಥೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಧನ್ ಧಾನ್ಯ ಕೃಷಿ ಯೋಜನೆ ಮತ್ತು ದ್ವಿದಳ ಧಾನ್ಯಗಳ ಸ್ವಾವಲಂಬನೆ ಮಿಷನ್ಗೆ ಚಾಲನೆ ನೀಡಿದರು.

ಈ ಎರಡು ಮಹತ್ವಾಕಾಂಕ್ಷೆಯ ಕೃಷಿ ಯೋಜನೆಗಳಿಗೆ ಒಟ್ಟು 35,440 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ವಿಶೇಷ ಕೃಷಿ ಕಾರ್ಯಕ್ರಮದಲ್ಲಿ ಮೋದಿಯವರು ಭಾಗವಹಿಸಿದ್ದರು.
ಈ ವೇಳೆ ಲೋಕ ನಾಯಕ್ ಜಯಪ್ರಕಾಶ್ ನಾರಾಯಣ್ ಅವರ ಜನ್ಮದಿನೋತ್ಸವದ ಹಿನ್ನಲೆ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸಿದರು. ಬಳಿಕ ಪ್ರಧಾನ ಮಂತ್ರಿ ಕೃಷಿ ಮೂಲಸೌಕರ್ಯ ನಿಧಿ, ಪಶುಸಂಗೋಪನೆ, ಮೀನುಗಾರಿಕೆ ಮತ್ತು ಆಹಾರ ಸಂಸ್ಕರಣಾ ವಲಯಗಳ ಅಡಿಯಲ್ಲಿ ಹಲವು ಯೋಜನೆಗಳನ್ನು ಉದ್ಘಾಟಿಸಿ, ಶಿಲಾನ್ಯಾಸ ಮಾಡಿದರು.
24,000 ಕೋಟಿ ರೂ. ಮೌಲ್ಯದ ಪ್ರಧಾನ ಮಂತ್ರಿ ಧನ್ ಧಾನ್ಯ ಯೋಜನೆಯು 2030-31ರ ವೇಳೆಗೆ ದ್ವಿದಳ ಧಾನ್ಯಗಳ ಕೃಷಿ ಪ್ರದೇಶವನ್ನು 27.5 ಮಿಲಿಯನ್ ಹೆಕ್ಟೇರ್ನಿಂದ 31 ಮಿಲಿಯನ್ ಹೆಕ್ಟೇರ್ಗೆ ಹೆಚ್ಚಿಸುವ ಗುರಿಯನ್ನು ಹೊಂದಿದೆ. ದ್ವಿದಳ ಧಾನ್ಯಗಳಲ್ಲಿ ಸ್ವಾವಲಂಬನೆ ಸಾಧಿಸಲು ದ್ವಿದಳ ಧಾನ್ಯಗಳ ಸ್ವಾವಲಂಬನೆ ಮಿಷನ್ ಪ್ರಾರಂಭಿಸಲಾಗಿದೆ. ಈ ಯೋಜನೆಗೆ 11,440 ಕೋಟಿ ರೂ. ವೆಚ್ಚವಾಗಲಿದೆ.
ಸುಮಾರು 3,650 ಕೋಟಿ ರೂ. ವೆಚ್ಚದಲ್ಲಿ ಕೃಷಿ ಮೂಲಸೌಕರ್ಯ ನಿಧಿ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಪಶುಸಂಗೋಪನೆಗಾಗಿ 17 ವಿಭಿನ್ನ ಯೋಜನೆಗಳಿಗೆ ಸುಮಾರು 1,166 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಇದಲ್ಲದೆ, ಮೀನುಗಾರಿಕೆ ಮತ್ತು ಆಹಾರ ಸಂಸ್ಕರಣಾ ಕ್ಷೇತ್ರಗಳಲ್ಲಿ 5,450 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಯೋಜನೆಗಳನ್ನು ಅವರು ಉದ್ಘಾಟಿಸಿದರು. ಸುಮಾರು 815 ಕೋಟಿ ರೂ.ಗಳ ಹೆಚ್ಚುವರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.