ಶ್ರೀನಗರ, ಅ. 13 (DaijiworldNews/AA): ಚಳಿಗಾಲದ ಸಮಯದಲ್ಲಿ ಉಗ್ರರ ಒಳನುಸುಳುವಿಕೆ ತಡೆಯುವ ಸಲುವಾಗಿ ಕಾಶ್ಮೀರ ಕಣಿವೆ ಪ್ರದೇಶದಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. ಎಲ್ಒಸಿಯಲ್ಲಿ (ಎಲ್ಒಸಿ ಗಡಿ ನಿಯಂತ್ರಣ ರೇಖೆ) ಉಗ್ರ ಲಾಂಚ್ಪ್ಯಾಡ್ಗಳು ಸಕ್ರಿಯಗೊಂಡಿರುವ ಹಿನ್ನೆಲೆ ಗಡಿಯುದ್ದಕ್ಕೂ ಗಡಿ ಭದ್ರತಾ ಪಡೆ ಎಚ್ಚರಿಕೆ ವಹಿಸಿದೆ.

ಗುಪ್ತಚರ ವರದಿಗಳ ಪ್ರಕಾರ, ಎಲ್ಒಸಿ ಗಡಿಯುದ್ಧಕ್ಕೂ ಹಲವಾರು ಲಾಂಚ್ ಪ್ಯಾಡ್ಗಳಲ್ಲಿ ಭಯೋತ್ಪಾದಕರು ಕಣಿವೆಯೊಳಗೆ ನುಸುಳಲು ಕಾಯುತ್ತಿದ್ದಾರೆ. ಚಳಿಗಾಲದ ಸಂದರ್ಭದಲ್ಲಿ ಇದು ನಡೆಯುತ್ತಿರುತ್ತದೆ. ಹಾಗಾಗಿ ಚಳಿಗಾಲಕ್ಕೂ ಮುನ್ನವೇ ಎಚ್ಚರಿಕೆ ವಹಿಸಲಾಗಿದೆ ಎಂದು ಬಿಎಸ್ಎಫ್ ಮೂಲಗಳು ಮಾಹಿತಿ ನೀಡಿದೆ.
ಚಳಿಗಾಲ ಶುರುವಾಗುತ್ತಿದ್ದಂತೆ ಭಯೋತ್ಪಾದಕರ ಒಳನುಸುಳುವಿಕೆ ಪ್ರಯತ್ನವು ಸಾಮಾನ್ಯವಾಗಿ ಹೆಚ್ಚಾಗುತ್ತದೆ. ಹಾಗಾಗಿ ಗಡಿಯಲ್ಲಿ ಕಣ್ಗಾವಲು ಬಲಪಡಿಸಿದ್ದೇವೆ. ನಮ್ಮ ಸೈನಿಕರು, ಅಧಿಕಾರಿಗಳನ್ನ ಅಲರ್ಟ್ ಮಾಡಿದ್ದೇವೆ. ಗುಪ್ತಚರ ಮಾಹಿತಿಯ ಪ್ರಕಾರ, ಈಗಾಗಲೇ ಗಡಿಯಲ್ಲಿ ಹಲವಾರು ಭಯೋತ್ಪಾದಕ ಲಾಂಚ್ ಪ್ಯಾಡ್ಗಳನ್ನ ಸಕ್ರಿಯಗೊಳಿಸಿದೆ. ಅಲ್ಲಿಂದ ಭಯೋತ್ಪಾದಕರು ಒಳನುಸುಳಲು ತಯಾರಿ ನಡೆಸುತ್ತಿದ್ದಾರೆ ಎಂದು ಬಿಎಸ್ಎಫ್ ಹೆಚ್ಚುವರಿ ಮಹಾನಿರ್ದೇಶಕ ಸತೀಶ್ ಎಸ್. ಖಂಡ್ರೆ ತಿಳಿಸಿದ್ದಾರೆ.
ಸದ್ಯಕ್ಕೆ ಎಷ್ಟು ಉಗ್ರರು ಇದ್ದಾರೆ ಅನ್ನೋದು ಅಂದಾಜು ಮಾಡುವುದು ಕಷ್ಟ. ಆದರೆ ಕೆಲ ಚಟುವಟಿಕೆಗಳು ಸಕ್ರಿಯಗೊಂಡಿರುವ ಬಗ್ಗೆ ವರದಿ ಬಂದಿದೆ. ಹಾಗಾಗಿ ನಾವು ಗಡಿಯ ಎಲ್ಲಾ ಭಾಗದಲ್ಲು ಸಕ್ರಿಯವಾಗಿದ್ದೇವೆ ಎಂದು ಅವರು ಹೇಳಿದ್ದಾರೆ.