ನವದೆಹಲಿ, ಅ. 13 (DaijiworldNews/AA): ಭಾರತೀಯ ರೈಲ್ವೇಯಲ್ಲಿ ನಡೆದಿದೆ ಎನ್ನಲಾಗಿರುವ ಹಗರಣಕ್ಕೆ ಸಂಬಂಧಿಸಿದಂತೆ ಆರ್ಜೆಡಿ ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್, ಬಿಹಾರ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಹಾಗೂ ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ವಿರುದ್ಧ ನ್ಯಾಯಾಲಯ ದೋಷಾರೋಪ ನಿಗದಿ ಮಾಡಿದೆ.

ವಿಶೇಷ ನ್ಯಾಯಾಧೀಶ (ಭ್ರಷ್ಟಾಚಾರ ತಡೆ ಕಾಯ್ದೆ) ವಿಶಾಲ್ ಗೊಗ್ನೆ ಅವರು, ರಾಬ್ಡಿ ದೇವಿ ಹಾಗೂ ತೇಜಸ್ವಿ ವಿರುದ್ಧ ಕ್ರಿಮಿನಲ್ ಸಂಚು ಹಾಗೂ ಮೋಸದ ಆರೋಪ ಹೊರಿಸಿದ್ದಾರೆ. ಐಆರ್ಸಿಟಿಸಿಯ ಎರಡು ಹೋಟೆಲ್ಗಳನ್ನು ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡುವಾಗ ಅವ್ಯವಹಾರ ನಡೆದಿದೆ ಎಂದು ಆರೋಪ ಮಾಡಲಾಗಿದೆ.
ನ್ಯಾಯಾಲಯವು ಲಾಲು ಪ್ರಸಾದ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿಯೂ ಆರೋಪಗಳನ್ನು ಹೊರಿಸಿದೆ. ದೋಷಾರೋಪ ನಿಗದಿ ಮಾಡುವ ಆದೇಶದ ವೇಳೆ ಮೂವರು ಖುದ್ದಾಗಿ ನ್ಯಾಯಾಲಯದಲ್ಲಿ ಹಾಜರಿರಬೇಕು ಎಂದು ಮೂವರಿಗೂ ಕೋರ್ಟ್ ಸೆಪ್ಟೆಂಬರ್ 24ರಂದೇ ಸೂಚಿಸಿತ್ತು.
ನೀವು ಪಿತೂರಿಯಲ್ಲಿ ತೊಡಗಿದ್ದೀರಿ ಮತ್ತು ಸರ್ಕಾರದ ಸೇವಕರಾಗಿ ನಿಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದೀರಿ. ನೀವು ಟೆಂಡರ್ ಮೇಲೆ ಪ್ರಭಾವ ಬೀರಿದ್ದೀರಿ ಮತ್ತು ಅರ್ಹತಾ ಷರತ್ತುಗಳನ್ನು ನಿಮಗೆ ಬೇಕಾದಂತೆ ಬದಲಾಯಿಸಿದ್ದೀರಿ ಎಂದು ಕೋರ್ಟ್ ತಿಳಿಸಿದೆ.