ಬೆಂಗಳೂರು, ಜು 01 (Daijiworld News/MSP): ರಾಜ್ಯ ರಾಜಕೀಯದಲ್ಲಿ ಧಿಡೀರ್ ಬೆಳವಣಿಗೆ ನಡೆಯುತ್ತಿದ್ದು ಬಳ್ಳಾರಿಯ ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಸೋಮವಾರದಂದು ಬೆಂಗಳೂರಿನ ದೊಮ್ಮಲೂರಿನಲ್ಲಿರುವ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿಯಾಗಿ ಆನಂದ್ ಸಿಂಗ್ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಆನಂದ್ ಸಿಂಗ್ ರಾಜೀನಾಮೆ ಮೈತ್ರಿ ಸರ್ಕಾರ ಹಾಗೂ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ಏತನ್ಮಧ್ಯೆ, ರಾಜೀನಾಮೆ ವಿಚಾರವಾಗಿ ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್, ಶಾಸಕ ಆನಂದ್ ಸಿಂಗ್ ಅವರು ನನಗೆ ರಾಜೀನಾಮೆ ಪತ್ರ ಕೊಟ್ಟಿಲ್ಲ. ಸ್ವೀಕರ್ ಕಚೇರಿಗೆ ಆನಂದ್ ಸಿಂಗ್ ರಾಜೀನಾಮೆ ನೀಡಿರುವ ಬಗ್ಗೆ ನನಗೆ ತಿಳಿದಿಲ್ಲ ಎಂದು ಹೇಳುವ ಮೂಲಕ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.
ಶಾಸಕ ಆನಂದ್ ಸಿಂಗ್ ಆಪ್ತ ಬಂಡಾಯ ಶಾಸಕರಾದ ನಾಗೇಂದ್ರ, ಶಾಸಕ ಗಣೇಶ್ ಹಾಗೂ ಶಾಸಕ ಬಿ.ಸಿ ಪಾಟೀಲ್ ಮೊಬೈಲ್ ಸ್ವಿಚ್ ಆಫ್ ಆಗಿರುವ ಕಾರಣ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.