ನವದೆಹಲಿ, ಅ. 15 (DaijiworldNews/AA): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಕ್ಟೋಬರ್ 18ರಿಂದ 21ರವರೆಗೆ ಹಸಿರು ಪಟಾಕಿ ಸಿಡಿಸಲು ಸುಪ್ರೀಂ ಕೋರ್ಟ್ ಅವಕಾಶ ನೀಡಿದೆ. ಪಟಾಕಿ ಸಿಡಿಸುವ ಬಗ್ಗೆ ಸಮತೋಲನದ ತೀರ್ಮಾನ ಕೈಗೊಳ್ಳಬೇಕಾಗಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ವಲಯದ ನಗರಗಳಲ್ಲಿ ಪಟಾಕಿ ಸಿಡಿತದಿಂದ ವಾಯು ಮಾಲಿನ್ಯ ಮಿತಿ ಮೀರುತ್ತದೆ. ಮೂರು ನಾಲ್ಕು ದಿನಗಳವರೆಗೂ ಜನರು ಮನೆಯಿಂದ ಹೊರ ಬರಲು ಸಾಧ್ಯವಾಗದಂಥ ಸ್ಥಿತಿ ನಿರ್ಮಾಣವಾಗುತ್ತದೆ. ಮನೆಯಿಂದ ಹೊರ ಬಂದರೆ, ಕಣ್ಣು ಉರಿ, ಕಣ್ಣೀರು ಬರುತ್ತದೆ. ಅಷ್ಟರ ಮಟ್ಟಿಗೆ ದೆಹಲಿಯಲ್ಲಿ ಪಟಾಕಿಗಳಿಂದ ವಾಯು ಮಾಲಿನ್ಯವಾಗುತ್ತದೆ. ಹೀಗಾಗಿ ಕೆಲವೊಮ್ಮೆ ಪಟಾಕಿ ಸಿಡಿಸಲು ನಿರ್ಬಂಧ ವಿಧಿಸಲಾಗುತ್ತದೆ. ಆದರೆ ಸುಪ್ರೀಂಕೋರ್ಟ್ ಈಗ ಹಸಿರು ಪಟಾಕಿಗೆ ಮಾತ್ರ ದೆಹಲಿಯಲ್ಲಿ ಅವಕಾಶ ನೀಡಿದೆ.
ಹಸಿರು ಪಟಾಕಿಗಳಿಂದ ಹೆಚ್ಚಿನ ವಾಯು ಮಾಲಿನ್ಯವಾಗಲ್ಲ. ಹಿಂದೂಗಳು ಪಟಾಕಿ ಸಿಡಿಸುವ ಮೂಲಕ ಸಂಪ್ರದಾಯ, ಸಂಸ್ಕೃತಿಯನ್ನು ಪಾಲಿಸಿದಂತಾಗುತ್ತದೆ. ಜೊತೆಗೆ ಪರಿಸರಕ್ಕೂ ಹಾನಿ ಇಲ್ಲ. ಹೀಗಾಗಿ ಸುಪ್ರೀಂಕೋರ್ಟ್ ಸಂಸ್ಕೃತಿ, ಸಂಪ್ರದಾಯವನ್ನು ಗಮನದಲ್ಲಿಟ್ಟುಕೊಂಡು ಪರಿಸರಕ್ಕೂ ಹಾನಿಯಾಗದಂಥ ಪಟಾಕಿಗಳಾದ ಹಸಿರು ಪಟಾಕಿಗಳನ್ನು ಸಿಡಿಸಲು ಅನುಮತಿ ಕೊಟ್ಟಿದೆ. ದೀಪಾವಳಿ ಸಮಯದಲ್ಲಿ ಬೆಳಗ್ಗೆ 6ರಿಂದ 7ಗಂಟೆಯವರೆಗೆ ಹಾಗೂ ಸಂಜೆ 6ರಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಪಟಾಕಿಗಳನ್ನು ಸಿಡಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
ಈ ಮೊದಲು ಹಸಿರು ಪಟಾಕಿ ಉತ್ಪಾದನೆಗೆ ಅವಕಾಶ ನೀಡಿ ಮಾರಾಟಕ್ಕೆ ನಿಷೇಧ ಹೇರಿತ್ತು. ಆದೇಶ ಮರು ಪರಿಶೀಲನೆ, ಹಸಿರು ಪಟಾಕಿ ಸಿಡಿಸಲು ಅನುಮತಿ ಕೋರಿ ದೆಹಲಿ ಎನ್ಸಿಆರ್ ರಾಜ್ಯಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು. ವಿಚಾರಣೆ ಬಳಿಕ ಹಸಿರು ಪಟಾಕಿ ಸಿಡಿಸಲು ಷರತ್ತು ಬದ್ಧ ಅನುಮತಿ ನೀಡಲಾಗಿದೆ.