ಚೆನ್ನೈ, ಅ. 15 (DaijiworldNews/AA): ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ಹಿಂದಿ ಹೇರಿಕೆಯನ್ನು ನಿಷೇಧಿಸುವ ಮಸೂದೆಯನ್ನು ಮಂಡನೆ ಮಾಡದೇ ಇರಲು ತಮಿಳುನಾಡು ಸರ್ಕಾರ ತೀರ್ಮಾನಿಸಿದೆ.

ರಾಜ್ಯದ್ಯಂತ ಹಿಂದಿ ಹೋರ್ಡಿಂಗ್ಗಳು, ಬೋರ್ಡ್ಗಳು, ಚಲನಚಿತ್ರಗಳು ಮತ್ತು ಹಾಡುಗಳನ್ನು ನಿಷೇಧಿಸುವ ಮಸೂದೆ ಮಂಡಿಸಲು ತಮಿಳುನಾಡು ಸರ್ಕಾರ ಮುಂದಾಗಿತ್ತು. ಈ ಪ್ರಸ್ತಾವಿತ ಮಸೂದೆ ಸಂವಿಧಾನ ವ್ಯಾಪ್ತಿಯ ಒಳಗಡೆ ಇರಲಿದೆ. ಮಸೂದೆಯ ಬಗ್ಗೆ ಮಂಗಳವಾರ ರಾತ್ರಿ ಕಾನೂನು ತಜ್ಞರೊಂದಿಗೆ ತುರ್ತು ಸಭೆ ನಡೆಸಲಾಗಿತ್ತು ಎಂದು ಸರ್ಕಾರ ಮೂಲಗಳಿಂದ ತಿಳಿದುಬಂದಿತ್ತು.
ಮಸೂದೆಯ ಕುರಿತು ಪ್ರತಿಕ್ರಿಯಿಸಿದ ಹಿರಿಯ ಡಿಎಂಕೆ ನಾಯಕ ಟಿಕೆಎಸ್ ಇಳಂಗೋವನ್, ನಾವು ಸಂವಿಧಾನಕ್ಕೆ ವಿರುದ್ಧವಾಗಿ ಏನನ್ನೂ ಮಾಡುವುದಿಲ್ಲ. ನಾವು ಅದನ್ನು ಪಾಲಿಸುತ್ತೇವೆ. ಹಿಂದಿ ಹೇರಿಕೆಯನ್ನು ನಾವು ವಿರೋಧಿಸುತ್ತೇವೆ ಎಂದು ಹೇಳಿದರು.
ತಮಿಳುನಾಡು ಬಿಜೆಪಿಯೂ ಸರ್ಕಾರದ ನಿರ್ಧಾರಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿದೆ.ಬಿಜೆಪಿಯ ವಿನೋಜ್ ಸೆಲ್ವಂ ಸರ್ಕಾರದ ಕ್ರಮವನ್ನು ಇದೊಂದು ಮೂರ್ಖತನ ಮತ್ತು ಅಸಂಬದ್ಧ ನಿರ್ಧಾರ. ಭಾಷೆಯನ್ನು ರಾಜಕೀಯ ಸಾಧನವಾಗಿ ಬಳಸಬಾರದು ಎಂದಿದ್ದಾರೆ.