ಬೆಂಗಳೂರು, ಅ. 15 (DaijiworldNews/AK):ರಾಜ್ಯ ಸರಕಾರವು ಅತಿವೃಷ್ಟಿ, ಅನಾವೃಷ್ಟಿ, ರಸ್ತೆ ಗುಂಡಿ ಮುಚ್ಚುವ ಕಡೆ ಗಮನ ಕೊಟ್ಟಿಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಲವು ಕಡೆ ಅತಿವೃಷ್ಟಿ ಇದ್ದು, ರಾಜ್ಯ ಸರ್ಕಾರ ಕಿಂಚಿತ್ತು ತಲೆಕೆಡಿಸಿಕೊಳ್ಳಲಿಲ್ಲ. ಬಿಜೆಪಿ ರಾಜ್ಯ ಅಧ್ಯಕ್ಷರು, ನಾನು, ಆರ್. ಅಶೋಕ್ ಮತ್ತು ಸಿ.ಟಿ. ರವಿ ಇನ್ನು ಮುಂತಾದ ಅನೇಕ ನಾಯಕರು ಎರಡು ತಂಡವಾಗಿ ಅತಿವೃಷ್ಟಿಯ ಪ್ರದೇಶಕ್ಕೆ ಹೋಗಿದ್ದೆವು ಎಂದು ತಿಳಿಸಿದರು.
ನಾವು ಹೋದ ಮೇಲೆ ಮುಖ್ಯಮಂತ್ರಿಗಳು ವಿಮಾನ ಹತ್ತಿದರು; ಕೆಲವು ಘೋಷಣೆ ಮಾಡಿದರು. ಆದರೆ ಘೋಷಣೆಗಳು ಜನರಿಗೆ ತಲುಪಲಿಲ್ಲ ಎಂದು ಆರೋಪಿಸಿದರು. ರಾಜ್ಯದಲ್ಲಿ ಈಗಾಗಲೇ ಕಲಬುರಗಿ, ಚಿಕ್ಕೋಡಿ, ಬಿಜಾಪುರ ಪ್ರಾಂತಗಳಲ್ಲಿ ಜನರು ಬೀದಿಗಿಳಿದು ಕಾಂಗ್ರೆಸ್ ಸರ್ಕಾರದ ವಿರುದ್ಧ ಧರಣಿ ಮಾಡುತ್ತಿದ್ದಾರೆ. ಚಿಕ್ಕಬಳ್ಳಾಪುರ, ಚಿತ್ರದುರ್ಗ, ತುಮಕೂರ ಮತ್ತು ಕೋಲಾರ ಮುಂತಾದ ಭಾಗಗಳಲ್ಲಿ ಅನಾವೃಷ್ಟಿ ಇದೆ. ಇದರ ಬಗ್ಗೆಯೂ ಅವರು ತಲೆಕೆಡಿಸಿಕೊಂಡಿಲ್ಲ ಎಂದು ದೂರಿದರು.
ರಸ್ತೆ ಗುಂಡಿಗಳಿಗೆ ಮಹತ್ವ ಕೊಡದ ಈ ಸರ್ಕಾರ, ಬಿಜೆಪಿ ಸರಿಯಾಗಿ ಕೆಲಸ ಮಾಡಿದ್ದರೆ ಈ ಗುಂಡಿಗಳು ಇರುತ್ತಿರಲಿಲ್ಲ ಎಂದು ಹೇಳುವುದಕ್ಕೆ ಪ್ರಾರಂಭಿಸಿದೆ ಎಂದು ಆಕ್ಷೇಪಿಸಿದರು. ನಾವು ಸರ್ಕಾರ ಕಳೆದುಕೊಂಡು ಎರಡೂವರೆ ವರ್ಷವಾಯಿತು. ಪ್ರತೀ ವರ್ಷ ಮಳೆಗಾಲದಲ್ಲಿ ರಸ್ತೆ ಗುಂಡಿಗಳು ಬೀಳುವುದು ಸಹಜ, ಆದರೆ ಈಗಲೂ ನಮ್ಮದೇ ಸರ್ಕಾರ ಇದೆ ಎಂದು ತಿಳಿದುಕೊಂಡಿದ್ದಾರೆ ಎಂದು ತಿಳಿಸಿದರು.
ಗುಂಡಿಯಲ್ಲಿ ಕಾಣುವ ಸಿಎಂ, ಡಿಸಿಎಂ ಮುಖ
ಬೆಂಗಳೂರು ಅಥವಾ ಎಲ್ಲೇ ರಸ್ತೆ ಗುಂಡಿಗಳು ಇದ್ದರೆ ಮಳೆ ಬಂದಾಗ ನೀರು ನಿಲ್ಲುತ್ತದೆ. ಈ ಸರ್ಕಾರ ಮತ್ತು ಸಚಿವರಿಗೆ ಮುಖವು ಆಡಳಿತದಲ್ಲಿ ಕಾಣುತ್ತಿಲ್ಲ ರಸ್ತೆ ಗುಂಡಿಗಳಲ್ಲಿನ ನೀರಿನಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಸಚಿವರ ಮುಖ ಕಾಣುತ್ತಿದೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದರು.