ಮುಂಬೈ, ಜು 01 (Daijiworld News/MSP): ವಾಣಿಜ್ಯ ನಗರಿ ಮುಂಬೈ ರಾತ್ರಿಯಿಡೀ ಸುರಿದ ಧಾರಾಕಾರ ಮಹಾಮಳೆಗೆ ತತ್ತರಿಸಿ ಹೋಗಿದ್ದು , ಬಹುತೇಕ ಪ್ರದೇಶದಲ್ಲಿ ಹಾಗೂ ರೈಲ್ವೆ ಹಳಿಗಳು ಸಂಪೂರ್ಣ ಜಲಾವೃತವಾಗಿದ್ದು, ಜನಜೀವನ ಅಸ್ಥವ್ಯಸ್ಥವಾಗಿದೆ.
ಭಾನುವಾರ ರಾತ್ರಿ ಮುಂಬೈಯಲ್ಲಿ 361 ಮಿಲಿ ಮೀಟರ್ ನಷ್ಟು ಧಾರಾಕಾರ ಮಳೆ ಸುರಿದಿದ್ದು ಸೋಮವಾರ ಮುಂಜಾನೆ ಜಾವ ಮುಂಬೈಯ ಪಲ್ಗರ್ ಪ್ರದೇಶದಲ್ಲಿ 4 ಗಂಟೆಯಿಂದ 5 ಗಂಟೆಯವರೆಗೆ 1 ಗಂಟೆಯಲ್ಲಿ 100 ಮಿಲಿ ಮೀಟರ್ ನಷ್ಟು ಮಳೆ ಸುರಿದಿದೆ.
ಭಾರೀ ಮಳೆಗೆ ತಗ್ಗು ಪ್ರದೇಶಗಳೆಲ್ಲಾ ನೀರಿನ ಅವೃತಗೊಂಡಿದ್ದು, ಸ್ಥಳೀಯರು ಹಾಗೂ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ. ಪಶ್ಚಿಮ ರೈಲ್ವೆ ವಿಭಾಗದ 13 ರೈಲುಗಳ ಸಂಚಾರವನ್ನು ಇಂದು ಮಳೆಯ ಕಾರಣದಿಂದ ರದ್ದುಪಡಿಸಲಾಗಿದೆ . ರೈಲು ಸಂಚಾರ ಸ್ಥಗಿತಗೊಂಡಿದ್ದರಿಂದ ಕಚೇರಿಗೆ, ಶಾಲಾ, ಕಾಲೇಜಿಗೆ ತೆರಳುವವರು ತೊಂದರೆ ಅನುಭವಿಸುವಂತಾಗಿದೆ. ದಾದಾರ್ ಪೂರ್ವ ಪ್ರದೇಶದ ರಸ್ತೆಗಳಲ್ಲಿ ನೀರು ತುಂಬಿ ಮಕ್ಕಳು ಮಂಡಿಯವರೆಗೆ ತುಂಬಿದ ನೀರಿನಲ್ಲಿಯೇ ಸಂಚರಿಸುವ ದೃಶ್ಯ ಕಂಡುಬರುತ್ತಿದೆ.
ಇದೇ ರೀತಿಯ ಧಾರಾಕಾರ ಮಳೆ ಮುಂಬೈ, ಥಾಣೆ, ರಾಯ್ ಗಾಢ್ ಮತ್ತು ಪಲ್ಗರ್ ಪ್ರದೇಶದಲ್ಲಿ ಇನ್ನೆರಡು ದಿನ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ.