ಬೆಂಗಳೂರು, ಅ. 16 (DaijiworldNews/AK): ನೆಹರೂ, ಇಂದಿರಾ ಗಾಂಧಿಯವರಿಗೆ ಹೆದರದ ಆರೆಸ್ಸೆಸ್, ಪ್ರಿಯಾಂಕ್ ಖರ್ಗೆಯಂಥ ಚಮಚಾಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ಕು. ಶೋಭಾ ಕರಂದ್ಲಾಜೆ ಅವರು ಸ್ಪಷ್ಟವಾಗಿ ನುಡಿದರು. ಇಂಥ ಸಿದ್ದರಾಮಯ್ಯನವರ ಸರಕಾರವನ್ನು ನಾವು ದೇಶದಲ್ಲಿ ಬಹಳ ನೋಡುತ್ತಿದ್ದೇವೆ ಎಂದು ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆ ತಿಳಿಸಿದರು.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2-3 ರಾಜ್ಯಗಳಲ್ಲಿ ಸರಕಾರ ನಡೆಸಿಕೊಂಡು ನಾವು ಬಿಜೆಪಿ, ಆರೆಸ್ಸೆಸ್ ಅನ್ನು ಬೆದರಿಸುತ್ತೇವೆ ಎಂದರೆ ಅದು ಮೂರ್ಖತನ ಎಂದು ನುಡಿದರು. 1948ರಲ್ಲಿ ಆರೆಸ್ಸೆಸ್ ನಿಷೇಧಿಸಿದ್ದರು. ಆಮೇಲೆ ಏನಾಯಿತು? ನೀವೇನೂ ಮಾಡಲಾಗಲಿಲ್ಲ; 1975ರಲ್ಲಿ ನಮ್ಮೆಲ್ಲ ನಾಯಕರನ್ನು ಬಂಧಿಸಿದ್ದರು. ಫ್ರೀಡಂ ಪಾರ್ಕಿನ ಹಳೆ ಜೈಲಿನಲ್ಲಿ ಆಡ್ವಾಣಿ, ವಾಜಪೇಯಿಜೀ ಅವರಿದ್ದರು. ಏನಾಯಿತು ಎಂದು ಕೇಳಿದರು.
ಇವತ್ತು ಆರೆಸ್ಸೆಸ್ ಒಂದು ಹೆಮ್ಮರವಾಗಿದೆ. ನೆಹರೂ, ಇಂದಿರಾ ಗಾಂಧಿ ಮಾಡಲು ಆಗದ್ದನ್ನು ಕೇವಲ ಮಲ್ಲಿಕಾರ್ಜುನ ಖರ್ಗೆಯ ಹೆಸರಿನಲ್ಲಿ ಬದುಕುವ ಪ್ರಿಯಾಂಕ್ ಖರ್ಗೆ ಕೈಲಿ ಮಾಡಲಾಗುತ್ತದೆಯೇ? ಕುರ್ಚಿಗಾಗಿ ದಿನನಿತ್ಯ ಜಗಳಾಡುವ ಸಿದ್ದರಾಮಯ್ಯ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಕನ್ನೇರಿ ಮಠದ ಸ್ವಾಮೀಜಿಯವರಿಗೆ ವಿಜಯಪುರ ಜಿಲ್ಲಾ ಪ್ರವೇಶಕ್ಕೆ ಹೇರಿದ ನಿರ್ಬಂಧವನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು. ಈ ಸರಕಾರಕ್ಕೆ ವಿನಾಶ ಕಾಲ ಹತ್ತಿರ ಬಂದಿದೆ. ಸ್ವಾಮೀಜಿಯವರ ವಿರುದ್ಧ ಹೇರಿದ ನಿರ್ಬಂಧವನ್ನು ರದ್ದು ಮಾಡದಿದ್ದರೆ, ಅವರ ಜೊತೆ ವಿಜಯಪುರ ಜಿಲ್ಲೆ ಪ್ರವೇಶಿಸಿ ಜೈಲಿಗೆ ಹೋಗಲೂ ಸಿದ್ಧ ಎಂದು ಪ್ರಕಟಿಸಿದರು. ದುರ್ಬುದ್ಧಿಯ ಸರಕಾರ ಇಲ್ಲಿದೆ. ತಕ್ಷಣ ತಿದ್ದಿಕೊಳ್ಳದೇ ಇದ್ದರೆ ಕನ್ನೇರಿ ಮಠದ ಸ್ವಾಮೀಜಿ ಜೊತೆ ನಾವು ನಿಲ್ಲುತ್ತೇವೆ ಎಂದು ಎಚ್ಚರಿಸಿದರು.
ವಿಜಯಪುರಕ್ಕೆ ಹೋದರೆ ಅದೆಷ್ಟು ದಿನ ಜೈಲಿನಲ್ಲಿ ಇಡುತ್ತೀರಿ ಎಂದು ನೋಡೋಣ ಎಂದು ಸವಾಲು ಹಾಕಿದರು. ನಿರ್ಬಂಧ ವಾಪಸ್ ಪಡೆಯದಿದ್ದರೆ ದೊಡ್ಡ ಹೋರಾಟ ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು. ಕೃಷಿಯ ಸಾಧನೆ ಗಮನಿಸಲು ಕೃಷಿ ತಜ್ಞರು, ಕೃಷಿ ಕಲಿಯುವ ಮಕ್ಕಳು ಈ ಮಠ ನೋಡಲು ಹೋಗುತ್ತಾರೆ. ಇದು ಕನ್ನೇರಿ ಮಠದ ಶ್ರೇಷ್ಠತೆ. ಅವರನ್ನು ನೀವು ವಿಜಯಪುರ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಹೇರಿದ್ದೀರಿ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಪರಮೇಶ್ವರ್ ಅವರೇ, ಇದು ವಿನಾಶಕಾಲೇ ವಿಪರೀತ ಬುದ್ಧಿ ಎಂದು ಗಮನಕ್ಕೆ ತಂದರು.
ಕನ್ನೇರಿ ಮಠದ ಸ್ವಾಮೀಜಿ ಯಾವ ಭಯೋತ್ಪಾದಕರ ಕೆಲಸ ಮಾಡಿದ್ದಾರೆ? ಸಿಎಂ, ಡಿಸಿಎಂ ಮತ್ತು ಗೃಹ ಸಚಿವರು ಕನ್ನೇರಿ ಮಠದ ಸ್ವಾಮೀಜಿ ಮಾಡಿದ ತಪ್ಪನ್ನು ತಿಳಿಸಲಿ ಎಂದು ಒತ್ತಾಯಿಸಿದರು.
ಲಿಂಗಾಯತರನ್ನು ಒಡೆಯಬೇಡಿ. ವೀರಶೈವರು, ಜಾತಿ ಧರ್ಮಗಳೆಂದು ಒಡೆಯದಿರಿ. ಜಾತಿ ಸರ್ವೇ ಮಾಡಿ ಗುಂಪು ಗುಂಪುಗಳಲ್ಲಿ ಒಡೆಯದಿರಿ ಎಂದು ಹೇಳಿದ್ದು ತಪ್ಪೇ? 2013ರಲ್ಲಿ ಇದೇ ಪಕ್ಷದ ಸರಕಾರ ಬಂದಾಗ ವೀರಶೈವ- ಲಿಂಗಾಯತರನ್ನು ಒಡೆಯುವ ಪ್ರಯತ್ನ ನಡೆಸಿದ್ದರು ಎಂದು ದೂರಿದರು.