ಮಹಾರಾಷ್ಟ್ರ, ಅ. 16 (DaijiworldNews/TA): ಭಂದಾರ ಜಿಲ್ಲೆಯಲ್ಲಿನ ದಾರುಣ ಘಟನೆಯೊಂದು ದೇಶದ ರಸ್ತೆಗಳ ಅವ್ಯವಸ್ಥಿತ ಸ್ಥಿತಿಯ ಇನ್ನೊಂದು ಉದಾಹರಣೆಯಾಗಿದೆ. ಇಂದು ಮಧ್ಯಾಹ್ನ, ಪ್ರಾಥಮಿಕ ಶಾಲೆಯ 10 ಮಕ್ಕಳನ್ನು ಹೊತ್ತೊಯ್ಯುತ್ತಿದ್ದ ಒಂದು ಖಾಸಗಿ ಓಮ್ನಿ ವಾಹನವು ಸೇತುವೆಯೊಂದರಲ್ಲಿ ನಿಯಂತ್ರಣ ತಪ್ಪಿ ಕೆಳಕ್ಕೆ ಉರುಳಿದ್ದು, ಎಲ್ಲಾ ಮಕ್ಕಳೂ ಗಾಯಗೊಂಡಿದ್ದಾರೆ. ಘಟನೆಯ ಬಳಿಕ ಗಾಯಗೊಂಡ ಮಕ್ಕಳನ್ನು ತಕ್ಷಣವೇ ಭಂದಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಾರುತಿ ಓಮ್ನಿ ಕಾರು ತುಂಬಾ ವೇಗದಲ್ಲಿ ಚಲಿಸುತ್ತಿದ್ದ ವೇಳೆ, ಒಂದು ಸಣ್ಣ ಸೇತುವೆ ಪ್ರದೇಶದಲ್ಲಿ ರಸ್ತೆಯಲ್ಲಿ ಇದ್ದ ದೊಡ್ಡ ಗುಂಡಿಯೊಂದನ್ನು ತಪ್ಪಿಸಲು ಚಾಲಕ ಯತ್ನಿಸಿದಾಗ, ವಾಹನದ ನಿಯಂತ್ರಣ ತಪ್ಪಿ ನೇರವಾಗಿ ಸೇತುವೆಯಿಂದ ಕೆಳಗೆ ಬಿದ್ದಿದೆ. ಶಾಲಾ ವಾಹನದಲ್ಲಿ ಕೇವಲ 10 ಮಕ್ಕಳು ಮಾತ್ರ ಇದ್ದರು.
ಈ ಅಪಘಾತಕ್ಕೆ ಸ್ಥಳೀಯರು ಮತ್ತು ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ಧಾರೆ. "ಭಂದಾರ ಜಿಲ್ಲೆ ಕೆರೆಗಳಿಗೆ ಹೆಸರುವಾಸಿಯಾದರೂ, ಇಲ್ಲಿ ಮೂಲಸೌಕರ್ಯಗಳ ಬೆಳವಣಿಗೆ ಅತಿಯಾದ ನಿರ್ಲಕ್ಷ್ಯಕ್ಕೊಳಗಾಗಿದೆ" ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರ ಮತ್ತು ಸ್ಥಳೀಯ ಆಡಳಿತ ರಸ್ತೆ ಸುಧಾರಣೆ ವಿಷಯದಲ್ಲಿ ಗಮನಹರಿಸುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಸಾರ್ವಜನಿಕರು ಕೂಡ ರಸ್ತೆ ಗುಂಡಿಗಳೇ ಈ ಅಪಘಾತಕ್ಕೆ ಪ್ರಮುಖ ಕಾರಣ ಎಂದು ಆರೋಪಿಸುತ್ತಿದ್ದಾರೆ. "ಇದಕ್ಕೆ ಹೊಣೆ ಯಾರು? ಮಕ್ಕಳಿಗೆ ಏನಾದರೂ ಆಗಿದ್ರೆ ಸರ್ಕಾರ ಏನು ಮಾಡುತ್ತಿತ್ತು?" ಎಂದು ಧ್ವನಿ ಎತ್ತಿದ್ದಾರೆ. ಈ ಘಟನೆ ರಾಜ್ಯದ ರಸ್ತೆ ಸುರಕ್ಷತೆಗೆ ಎಚ್ಚರಿಕೆಯ ಘಂಟೆಯಾಗಿದ್ದು, ಮಕ್ಕಳ ಜೀವದಾಸೆಗೆ ಹಿನ್ನಡೆಯಾಗುವ ಮೊದಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಹೆಚ್ಚುತ್ತಿದೆ.