ಬೆಂಗಳೂರು, ಜು 01 (Daijiworld News/MSP): " ಸರ್ಕಾರದ ವಿರುದ್ದ ನನ್ನದು ಏಕಾಂಗಿ ಹೋರಾಟ , ನಾನು ಯಾವುದೇ ಪಕ್ಷಕ್ಕೂ ಹೋಗಲು ಸಿದ್ದನಿಲ್ಲ, ಜಿಂದಾಲ್ ಕಂಪನಿಗೆ ಸರಕಾರಿ ಭೂಮಿ ಪರಭಾರೆ ವಿಚಾರಕ್ಕೆ ಸಂಬಂಧಿಸಿದಂತೆ ಸರಕಾರದ ನಡೆಯನ್ನು ವಿರೋಧಿಸಿ ನಾನು ರಾಜೀನಾಮೆ ನೀಡಿದ್ದೇನೆ" ಎಂದು ತಾವು ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆ ವಿಚಾರವಾಗಿ ವಿಜಯನಗರ ಶಾಸಕ ಆನಂದ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.
ಸೋಮವಾರ ಮಧ್ಯಾಹ್ನ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಆನಂದ್ ಸಿಂಗ್ ಮಾತನಾಡಿದರು. “ ರಾಜೀನಾಮೆ ನೀಡಲು ಜಿಂದಾಲ್ ಕಂಪನಿಗೆ ಸರ್ಕಾರ ಭೂಮಿ ನೀಡಿರುವುದೂ ಒಂದು ಕಾರಣ . ನಾನು ಸ್ಪೀಕರ್ ಅವರಿಗೂ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದೇನೆ. ಒಂದು ವೇಳೆ ತಲುಪಿಲ್ಲ ಎಂದಾದರೆ ತಾಂತ್ರಿಕವಾಗಿ ಇನ್ನೊಮ್ಮೆ ಸಲ್ಲಿಸುತ್ತೇನೆ” ಎಂದರು.
" ಜಿಂದಾಲ್ ಕಂಪೆನಿಗೆ ಸರಕಾರಿ ಭೂಮಿ ಪರಭಾರೆ ವಿಚಾರವಾಗಿ ಬಳ್ಳಾರಿಗೆ ಅನ್ಯಾಯವಾಗಿದೆ. ಕಂಪನಿ ಸರ್ಕಾರಿ ಭೂಮಿಯನ್ನು ತಮ್ಮ ಹೆಸರಿನಲ್ಲಿ ಕ್ರಯಕ್ಕೆ ಮಾಡಿಕೊಳ್ಳಲು ಹವಣಿಸುತ್ತಿದೆ. ಇದುವರೆಗೆ ಜಿಂದಾಲ್ ಕಂಪನಿ ಸುಮಾರು 11,000 ಎಕರೆಗಿಂತಲೂ ಹೆಚ್ಚು ಭೂಮಿಯನ್ನು ಸರ್ಕಾರದಿಂದ ಪಡೆದುಕೊಂಡಿದೆ. ರಾಜೀನಾಮೆ ವಿಚಾರವಾಗಿ ನಾನು ಯಾರನ್ನೂ ಭೇಟಿಯಾಗಿಲ್ಲ. ಯಾರ ಆಪರೇಷನ್ ಗೂ ಬಗ್ಗುವುದಿಲ್ಲ, ನಾನು ಏಕಾಂಗಿಯಾಗಿ ಹೋರಾಡುತ್ತೇನೆ " ಎಂದರು.