ಬೆಂಗಳೂರು, ಜು 01 (Daijiworld News/MSP): ಆಷಾಡ ಮಾಸ ಪ್ರಾರಂಭವಾಗುತ್ತಿದ್ದಂತೆಯೇ, ಯಾಕೋ ಸಮ್ಮಿಶ್ರ ಸರಕಾರಕ್ಕೆ ಒಂದರ ಮೇಲೊಂದರಂತೆ ಸಂಕಷ್ಟ ಎದುರಾಗುವ ಲಕ್ಷಣಗಳು ಗೋಚರಿಸುತ್ತಿವೆ. ಶಾಸಕರ ರಾಜೀನಾಮೆ ಪ್ರಹಸನ ಪ್ರಾರಂಭವಾಗಿದ್ದು , ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ರಾಜೀನಾಮೆ ನೀಡಿದ ಬೆನ್ನಲ್ಲೇ ಗೋಕಾಕ ಕ್ಷೇತ್ರದ ಶಾಸಕ, ಬಂಡಾಯದ ಬಾವುಟ ಹಾರಿಸಿದ್ದ ರೆಬೆಲ್ ಆಗಿದ್ದ ರಮೇಶ್ ಜಾರಕಿಹೊಳಿ ಕೂಡ ರಾಜೀನಾಮೆ ನೀಡಿದ್ದಾರೆ.
ಶಾಸಕ ರಮೇಶ್ ಜಾರಕಿಹೊಳಿ ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ನೇರವಾಗಿ ಭೇಟಿಯಾಗದೆ ಕಚೇರಿಗೆ ಕೈ ಬರಹದಲ್ಲಿ ಇರುವ ರಾಜೀನಾಮೆ ಪತ್ರವನ್ನು ಫಾಕ್ಸ್ ಮೂಲಕ ರವಾನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ರಾಜೀನಾಮೆ ಪತ್ರ ಕೈ ಸೇರಿರುವ ಬಗ್ಗೆ ಸ್ವೀಕರ್ ಆಗಲಿ, ಅಥವಾ ಅವರ ಕಚೇರಿಯಾಗಲಿ ಧೃಢಪಡಿಸಿಲ್ಲ.ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಬಂಡಾಯ ಶಾಸಕ ರಮೇಶ್ ಜಾರಕಿಹೊಳಿ ಮಂಗಳವಾರ ಭೇಟಿಯಾಗುವ ಸಾಧ್ಯತೆ ಇದೆ.