ಬೆಂಗಳೂರು, ಅ. 22 (DaijiworldNews/ TA): ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್ಎಸ್ಎಸ್ ವಿರುದ್ಧ ಮತ್ತೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದಲಿತ ಸಂಘಟನೆಗಳಿಗೆ ನಾನು ಪ್ರಾಯೋಜಕನೆಂದುಕೊಳ್ಳಬಹುದು, ಆದರೆ ಆರ್ಎಸ್ಎಸ್ಗೆ ಪ್ರಾಯೋಜಕರು ಯಾರು? ಅವರಿಗೆ ಹಣ ಎಲ್ಲಿಂದ ಬರುತ್ತದೆ? ಎಂಬುದು ಜನತೆಗೂ ಗೊತ್ತಾಗಬೇಕೆಂದು ಅವರು ಪ್ರಶ್ನಿಸಿದರು. ನೋಂದಣಿ ಇಲ್ಲದ ಸಂಸ್ಥೆಯಾಗಿರುವ ಆರ್ಎಸ್ಎಸ್ ತನ್ನ ಹಣದ ಮೂಲವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ಪ್ರಿಯಾಂಕ್ ಖರ್ಗೆ ಒತ್ತಾಯಿಸಿದರು.

ಕಲ್ಲು ತೂರಾಟ ಪ್ರಕರಣವನ್ನು ವಾಪಸ್ ಪಡೆದಿರುವ ವಿಷಯದಲ್ಲಿ ಪ್ರತಿಕ್ರಿಯಿಸಿದ ಅವರು, ಯಾವುದೇ ಕಾನೂನುಬಾಹಿರ ಸಲಹೆ ನೀಡಿಲ್ಲವೆಂದರು. “ಬಸವರಾಜ ಬೊಮ್ಮಾಯಿ ಗೃಹ ಸಚಿವರಾಗಿದ್ದಾಗ ಮಂಗಳೂರಿಗೆ ಭೇಟಿ ನೀಡಿದ ಸಂದರ್ಭ, ಕೆಲ ಸಂಘಟನೆಗಳೊಂದಿಗೆ ಅವರು ಮಾತುಕತೆ ನಡೆಸಿದ್ದರು. ಆಗ ಅವರಿಗೆ ಬೆಂಬಲ ನೀಡುವುದಾಗಿ ಭರವಸೆ ಕೂಡ ನೀಡಲಾಗಿತ್ತು. ಈಗ ಆ ವಿಚಾರದಲ್ಲಿ ಹಿಟ್ ಅಂಡ್ ರನ್ ರಾಜಕೀಯ ಮಾಡುವ ಅಗತ್ಯವಿಲ್ಲ,” ಎಂದರು.
ಆರ್ಎಸ್ಎಸ್ ವಿರುದ್ಧ ತೀವ್ರ ಹೋರಾಟದ ತೊಡಗಿಸಿಕೊಂಡಿರುವ ಪ್ರಿಯಾಂಕ್ ಖರ್ಗೆ, “ಅವರು ನಮ್ಮ ವೈಯಕ್ತಿಕ ವಿಚಾರಗಳಲ್ಲಿ ತಲೆಹಾಕುತ್ತಾರೆ, ಕುಟುಂಬಗಳಿಗೆ ಬೆದರಿಕೆ ಹಾಕುತ್ತಾರೆ. ಮೊದಲು ನಿಮ್ಮ ಸಂಸ್ಥೆಯ ದಾಖಲೆ ತೋರಿಸಿ. ಅದು ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯೇ? ಎಂಬುದನ್ನು ಸಾಬೀತುಪಡಿಸಿ. ಆಗ ನಾವು ಉತ್ತರಿಸುತ್ತೇವೆ,” ಎಂದು ನೇರ ಸವಾಲು ಹಾಕಿದರು.
ಇದೇ ವೇಳೆ, ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಹಾಗೂ ಬಿಎಸ್ ಯಡಿಯೂರಪ್ಪ ನಡುವಿನ ಆಡಿಯೋ ಸಂಭಾಷಣೆಯ ಕುರಿತು ಉಭಯನೀತಿಯ ಟೀಕೆ ಮಾಡುವ ಮೂಲಕ ಬಿಜೆಪಿ ವಿರುದ್ಧವೂ ವಾಗ್ದಾಳಿ ನಡೆಸಿದರು. “ಅನಂತ್ ಕುಮಾರ್ ಅವರ ಪುತ್ರಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರಲ್ಲದೆ, ಅವರು ವಕೀಲರಾಗಿರಬಹುದು. ಆದರೆ ಆ ವಿಡಿಯೋದಲ್ಲಿ ಕೇಳಿಬರುವ ಧ್ವನಿ ಅವರದ್ದೇ ಎಂಬುದನ್ನು ಎಫ್ಎಸ್ಎಲ್ (ಫೊರೆನ್ಸಿಕ್) ರಿಪೋರ್ಟ್ ತೋರಿಸಿದೆ. ಅನಂತ್ ಕುಮಾರ್ ಕಲಬುರಗಿಗೆ ಬಂದಾಗ ನನ್ನ ಬಗ್ಗೆ ಏನು ಹೇಳಿದರು ಎಂಬುದು ಜನರಿಗೆ ಗೊತ್ತಿದೆ. ಅವರ ಕುಟುಂಬದೊಂದಿಗೆ ಬಿಜೆಪಿ ಹೇಗೆ ವರ್ತಿಸಿದೆ ಎಂಬುದರ ಬಗ್ಗೆ ಜನರೇ ಮಾತನಾಡುತ್ತಿದ್ದಾರೆ,” ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.