ಬೆಂಗಳೂರು, ಅ. 22 (DaijiworldNews/ TA): ಕರ್ನಾಟಕದ ನದಿಗಳ ಪರಿಸ್ಥಿತಿ ಭಾರೀ ಚಿಂತೆಗೀಡಾಗಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬಿಡುಗಡೆ ಮಾಡಿದ ಇತ್ತೀಚಿನ ವರದಿ ರಾಜ್ಯದ ನದಿ ವ್ಯವಸ್ಥೆಗಳ ಪರಿಸ್ಥಿತಿ ಗಂಭೀರವಾಗಿರುವುದನ್ನು ಬಿಂಬಿಸಿದೆ. ರಾಜ್ಯದ 12 ಪ್ರಮುಖ ನದಿಗಳ ನೀರಿನ ಗುಣಮಟ್ಟ ಪರಿಶೀಲಿಸಿದ ಫಲಿತಾಂಶದ ಪ್ರಕಾರ, ಯಾವುದೇ ನದಿಯೂ ನೇರವಾಗಿ ಕುಡಿಯಲು ಯೋಗ್ಯವಿಲ್ಲ ಎಂದು ವರದಿಯು ಸ್ಪಷ್ಟಪಡಿಸಿದೆ.

ಸೆಪ್ಟೆಂಬರ್ 2025ರಲ್ಲಿ ನಡೆಸಿದ ಪರೀಕ್ಷೆಯಲ್ಲಿ, ಕಾವೇರಿ, ಕೃಷ್ಣ, ಭೀಮಾ, ತುಂಗಭದ್ರ, ಭದ್ರ, ಶಿಂಷಾ, ಕಬಿನಿ, ಅರ್ಕಾವತಿ, ನೇತ್ರಾವತಿ ಸೇರಿದಂತೆ ನದಿಗಳ ನೀರಿನ ಗುಣಮಟ್ಟವನ್ನು ತಪಾಸಣೆಗೊಳಪಡಿಸಲಾಯಿತು. ಈ ವರದಿ ಪ್ರಕಾರ, ಎ-ದರ್ಜೆ (ನೇರವಾಗಿ ಕುಡಿಯಲು ಯೋಗ್ಯ) ಗುಣಮಟ್ಟವನ್ನೂ ಒಂದು ನದಿಯೂ ತಲುಪಿಲ್ಲ. ನೇತ್ರಾವತಿ ನದಿ ಮಾತ್ರ ಬಿ-ದರ್ಜೆ ಗುಣಮಟ್ಟವನ್ನು ಹೊಂದಿದ್ದು, ಸಂಸ್ಕರಣೆ ನಂತರ ಗೃಹಬಳಕೆಗೆ ಬಳಸಲು ಸಾಧ್ಯವಿದೆ.
ಕಾವೇರಿ ಸಿ ದರ್ಜೆ – ಆತಂಕಕಾರಿ ಮಾಹಿತಿ : ರಾಜ್ಯದ ಪ್ರಮುಖ ಜೀವಜಲವಾಗಿರುವ ಕಾವೇರಿ ನದಿಯು ಸಿ-ದರ್ಜೆ ಗುಣಮಟ್ಟಕ್ಕೆ ಇಳಿದಿರುವುದು ಹೆಚ್ಚು ಆತಂಕಕಾರಿ ಬೆಳವಣಿಗೆಯಾಗಿದೆ. ಈ ದರ್ಜೆಯು ಸಾಮಾನ್ಯವಾಗಿ ಮೀನುಗಾರಿಕೆ, ಕೃಷಿ ಮತ್ತು ಇತರ ಚಟುವಟಿಕೆಗಳಿಗೆ ಸೂಕ್ತವಾದ ನೀರಿನ ಗುಣಮಟ್ಟವನ್ನು ಸೂಚಿಸುತ್ತದೆ. ಕುಡಿಯಲು ಅಥವಾ ನೇರವಾಗಿ ಬಳಸಲು ಇದು ಯೋಗ್ಯವಲ್ಲ.
ಕೃಷ್ಣಾ, ತುಂಗಭದ್ರ, ಭದ್ರ, ಶಿಂಷಾ, ಲಕ್ಷ್ಮಣತೀರ್ಥ, ಕಬಿನಿ ಸೇರಿದಂತೆ ಎಂಟು ನದಿಗಳು ಸಿ ದರ್ಜೆಗೆ ಸೇರಿದವು. ಇವುಗಳ ನೀರನ್ನೂ ಕೂಡ ಯಾವುದೇ ರೀತಿಯ ನೇರ ಬಳಕೆಗೆ ಮುನ್ನ ಸಂಸ್ಕರಿಸಬೇಕು. ಇದರ ಜೊತೆಗೆ, ಭೀಮಾ, ಕಾಗಿಣಾ ಮತ್ತು ಅರ್ಕಾವತಿ ನದಿಗಳು ಡಿ-ದರ್ಜೆಗೆ ಸೇರಿವೆ. ಅತ್ಯಂತ ಕಲುಷಿತ ನದಿಗಳ ಪಟ್ಟಿಯಲ್ಲಿ ಬೆಂಗಳೂರಿನ ವೃಷಭಾವತಿ ನದಿ ಝಡ್ (E) ದರ್ಜೆಗೆ ಸೇರಿದ್ದು, ಇದು ಸಂಪೂರ್ಣವಾಗಿ ಬಳಕೆಗೆ ಅಯೋಗ್ಯವಾಗಿದೆ.
ನದಿಗಳ ಈ ಸ್ಥಿತಿಗೆ ಕೈಗಾರಿಕಾ ರಾಸಾಯನಿಕ ವಿಸರ್ಜನೆ, ಜಲಮಾಲಿನ್ಯ, ಮತ್ತು ಹೈ ಬಯೋಕೆಮಿಕಲ್ ಆಕ್ಸಿಜನ್ ಡಿಮಾಂಡ್ ಮಟ್ಟ ಪ್ರಮುಖ ಕಾರಣಗಳಾಗಿ ಹೊರಹೊಮ್ಮಿವೆ. ನೀರಿನಲ್ಲಿ ಇರಬೇಕಾದ ಆಮ್ಲಜನಕ ಮಟ್ಟವು 6-8 ಮಿಲಿಗ್ರಾಂ ಪ್ರತಿ ಲೀಟರ್ ಆಗಿರಬೇಕು. ಆದರೆ ಹಲವಾರು ನದಿಗಳಲ್ಲಿ ಇದು 3ಮಿಲಿಗ್ರಾಂಗೂ ಕಡಿಮೆಯಾಗಿದೆ. ಜೊತೆಗೆ ಕೋಲಿಫಾರ್ಮ್ ಮತ್ತು ಫೇಕಲ್ ಕೋಲಿಫಾರ್ಮ್ ಬ್ಯಾಕ್ಟೀರಿಯಾದ ಅಪರಿಮಿತ ಪ್ರಮಾಣವೂ ನೀರಿನ ಗುಣಮಟ್ಟವನ್ನು ತೀವ್ರವಾಗಿ ಹದಗೆಡಿಸಿದೆ.
ಜೀವವೈವಿಧ್ಯ ಮತ್ತು ಜನಜೀವನದ ಮೇಲೆ ಭಾರಿ ಪರಿಣಾಮ : ಈ ವರದಿ ಕೇವಲ ಅಂಕಿಅಂಶಗಳ ಕಲಾಪವಲ್ಲ. ನದಿಗಳಿಂದ ಜೀವನಾಧಾರವನ್ನಾಗಿಸಿಕೊಂಡಿರುವ ಲಕ್ಷಾಂತರ ಗ್ರಾಮೀಣ ಜನರ ಆರೋಗ್ಯ ಮತ್ತು ಪರಿಸರದ ಸ್ಥಿರತೆಗೆ ಇದು ರೆಡ್ ಅಲರ್ಟ್ಗೆ ಸಮಾನವಾಗಿದೆ. ಪ್ರಾಕೃತಿಕ ಜೀವವೈವಿಧ್ಯವನ್ನೂ ಅಪಾಯದಲ್ಲಿಟ್ಟಿರುವ ಈ ಪರಿಸ್ಥಿತಿ, ತಕ್ಷಣದ ಪರಿಹಾರ ಕ್ರಮಗಳ ಅಗತ್ಯತೆಯನ್ನು ಒತ್ತಿಹೇಳುತ್ತಿದೆ.