ತಿರುವನಂತಪುರಂ, ಅ. 22 (DaijiworldNews/ TA): ಶಬರಿಮಲೆ ದೇವಸ್ಥಾನದಲ್ಲಿ ಚಿನ್ನ ಕಳವಾದ ಸುದ್ದಿ ಇನ್ನೂ ತಣಿಯದೇ ಇದ್ದರೂ, ಕೇರಳದ ಮತ್ತೊಂದು ಪ್ರಮುಖ ಹಿಂದೂ ಧಾರ್ಮಿಕ ತಾಣವಾದ ಗುರುವಾಯೂರ್ ದೇವಸ್ಥಾನದಲ್ಲಿ ಕೂಡ ಇದೇ ರೀತಿಯ ಮತ್ತೊಂದು ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಗುರುವಾಯೂರಪ್ಪ ದೇವಸ್ಥಾನವನ್ನು ನಿರ್ವಹಿಸುವ ಗುರುವಾಯೂರ್ ದೇವಸ್ವಂ ಮಂಡಳಿಯ ಆಡಿಟಿಂಗ್ ವರದಿಯಲ್ಲಿ ಸಾವಿರಾರು ಭಕ್ತರ ನಂಬಿಕೆಯನ್ನು ಕುಸಿಯುವಂತೆ ಮಾಡಬಹುದಾದ ಅಸಮರ್ಪಕತೆಗಳು ಪತ್ತೆಯಾಗಿವೆ. ಈ ವರದಿ ಪ್ರಕಾರ, ಚಿನ್ನ, ಬೆಳ್ಳಿ, ದಂತ ಹಾಗೂ ಇತರ ಮೌಲ್ಯಮಾಪನವಾಗದ ಧಾರ್ಮಿಕ ವಸ್ತುಗಳು ನಾಪತ್ತೆಯಾಗಿದ್ದು, ಒಟ್ಟಾರೆ ಸುಮಾರು ರೂ. 25 ಕೋಟಿ ಮೌಲ್ಯದ ವಸ್ತುಗಳಿಗೆ ಲೆಕ್ಕವಿಲ್ಲ ಎಂಬುವುದು ದೃಢವಾಗಿದೆ.

2019–20 ಮತ್ತು 2020–21 ಆರ್ಥಿಕ ವರ್ಷಗಳಿಗಾಗಿ ನಡೆಸಿದ ಆಡಿಟಿಂಗ್ನಲ್ಲಿ ಈ ಅಂಶಗಳು ಬಹಿರಂಗಗೊಂಡಿದ್ದು, ಈ ವರದಿ ಇದೀಗ ಚರ್ಚೆಗೆ ಗ್ರಾಸವಾಗಿದೆ. ವಿಶೇಷವಾಗಿ, ದೇವಸ್ಥಾನದ ಗೋಲ್ಡ್ ಸ್ಕೀಮ್ನಡಿಯಲ್ಲಿ ಠೇವಣಿಯಾಗಿದ್ದ ಚಿನ್ನದಿಂದ ಸುಮಾರು ರೂ. 79 ಲಕ್ಷ ನಷ್ಟವಾಗಿದೆ ಎಂಬುದನ್ನು ವರದಿ ಸ್ಪಷ್ಟಪಡಿಸುತ್ತದೆ. ಇದೇ ವೇಳೆ ದೇವಾಲಯದ ಆದಾಯ ಮತ್ತು ಖರ್ಚಿನ ಲೆಕ್ಕಪತ್ರಗಳಲ್ಲಿ ಅಸಂಗತಿಗಳು ಕಂಡುಬಂದಿದ್ದು, ಆಭರಣಗಳ ದಾಖಲೆಗಳು ಸರಿಯಾಗಿ ನಿರ್ವಹಿಸಲ್ಪಟ್ಟಿಲ್ಲ ಎಂಬುದೂ ಉಲ್ಲೇಖಿಸಲಾಗಿದೆ. ಆಡಿಟ್ ಮಾಡಿದ್ದ ಅಧಿಕಾರಿಗಳು ಚಿನ್ನ, ಬೆಳ್ಳಿ ಹಾಗೂ ಇತರ ಬೆಲೆಬಾಳುವ ವಸ್ತುಗಳ ಲೆಕ್ಕಾಚಾರದಲ್ಲಿಯೂ ದೊಡ್ಡ ಮಟ್ಟದ ವ್ಯತ್ಯಾಸವಿದೆ ಎಂದು ಸೂಚಿಸಿದ್ದಾರೆ.
ಈ ಪ್ರಕರಣ ಹೊರಬಿದ್ದ ನಂತರ, ಕೇರಳ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಕೆಲವರು ಈ ಸಮಸ್ಯೆಯ ಹಿಂದೆ ಉದ್ದೇಶಪೂರ್ವಕ ನಿರ್ಲಕ್ಷ್ಯವಿದೆ ಎಂದು ಆರೋಪಿಸಿದ್ದಾರೆ. ರಾಜಕೀಯ ವಿಶ್ಲೇಷಕ ಪ್ರದೀಪ್ ಭಂಡಾರಿ ಎಕ್ಸ್ ನಲ್ಲಿ "ಕೇರಳದ ಎಡಪಂಥೀಯ ಸರ್ಕಾರ ಹಿಂದೂ ದೇವಸ್ಥಾನಗಳನ್ನು ನಿರ್ಲಕ್ಷ್ಯ ಮಾಡುತ್ತಿದೆ" ಎಂದು ಬರೆದಿದ್ದಾರೆ.
ಇದೇ ವೇಳೆ, ಗುರುವಾಯೂರ್ ದೇವಸ್ವಂ ಮಂಡಳಿ ಸ್ಪಷ್ಟನೆ ನೀಡಿದ್ದು, ಆಡಿಟ್ನಲ್ಲಿ ಕಂಡುಬಂದ ಲೋಪದೋಷಗಳನ್ನು ತಿದ್ದುಪಡಿ ಮಾಡಲಾಗಿದೆ ಎಂದು ಹೇಳಿದೆ. ಈ ಸಂಬಂಧ ಕೇರಳ ಹೈಕೋರ್ಟ್ಗೆ ಅಫಿಡವಿಟ್ ಸಲ್ಲಿಸಲಾಗಿದ್ದು, ಲೆಕ್ಕಪತ್ರಗಳ ಸ್ಪಷ್ಟತೆಯ ಮೇಲೆ ಈಗ ಹೆಚ್ಚಿನ ಗಮನ ಹರಿಸಲಾಗುತ್ತಿದೆ ಎಂಬುದನ್ನು ಮಂಡಳಿ ಸ್ಪಷ್ಟಪಡಿಸಿದೆ. ಕೇರಳ ಸರ್ಕಾರವೂ ಇದೇ ನಿಲುವು ಪಡೆದುಕೊಂಡಿದ್ದು, ಭವಿಷ್ಯದಲ್ಲಿ ಈ ರೀತಿಯ ತಪ್ಪುಗಳು ಪುನರಾವರ್ತನೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದೆ.