ಹಾಸನ, ಅ. 22 (DaijiworldNews/ TA): ರಾಜ್ಯದ ಪ್ರಸಿದ್ಧ ಹಾಸನಾಂಬೆ ದೇವಿಯ ವಾರ್ಷಿಕ ಜಾತ್ರಾಮಹೋತ್ಸವ ಈ ಬಾರಿ ಅಭೂತಪೂರ್ವ ಭಕ್ತರ ನಿರೀಕ್ಷೆಯೊಂದಿಗೆ ಇಂದು ಯಶಸ್ವಿಯಾಗಿ ಸಂಪನ್ನವಾಗಿದೆ. ಅಕ್ಟೋಬರ್ 10ರಿಂದ ಆರಂಭವಾದ ದರ್ಶನೋತ್ಸವದಲ್ಲಿ ಈವರೆಗೆ ಇತಿಹಾಸದಲ್ಲಿಯೇ ಮೊದಲ ಬಾರಿಗೆ 24 ಲಕ್ಷಕ್ಕೂ ಹೆಚ್ಚು ಭಕ್ತರು ಭಾಗವಹಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಅಕ್ಟೋಬರ್ 22, ಅಂದರೆ ಇಂದು, ಜಾತ್ರೆಯ ಕೊನೆಯ ದಿನವಾಗಿದ್ದರಿಂದ ಮುಂಜಾನೆ 6 ಗಂಟೆಯಿಂದಲೇ ಭಕ್ತರ ದಂಡೆ ಹರಿದುಬಂದಿದ್ದು, ದೇವಾಲಯದ ಸುತ್ತಮುತ್ತ ಭಕ್ತರ ಬೃಹತ್ ಸಮುದಾಯ ಕಂಡುಬಂದಿತು.

ಈ ವರ್ಷ ದೇವಾಲಯ ಆಡಳಿತ ಮಂಡಳಿಗೆ ರೂ.25 ಕೋಟಿ ಆದಾಯ ಸಿಕ್ಕಿದ್ದು, ಇದು ಕಳೆದ ವರ್ಷದ ರೂ. 12.5 ಕೋಟಿಗಿಂತ ದ್ವಿಗುಣವಾಗಿದೆ. ವಿಶೇಷ ದರ್ಶನಕ್ಕಾಗಿ ರೂ.1000 ಮತ್ತು ರೂ.300 ಟಿಕೆಟ್ಗಳ ಮೂಲಕ 3.4 ಲಕ್ಷಕ್ಕೂ ಹೆಚ್ಚು ಭಕ್ತರು ದೇವಿಯ ಪಾದಸಮೀಪದಲ್ಲಿ ನಮನ ಸಲ್ಲಿಸುವ ಅವಕಾಶವನ್ನು ಪಡೆದಿದ್ದಾರೆ.
ಈ ಜಾತ್ರೆಯ ಸಂದರ್ಭದಲ್ಲಿ ಕೇವಲ ಸಾಮಾನ್ಯ ಭಕ್ತರು ಮಾತ್ರವಲ್ಲದೇ, ಅನೇಕ ರಾಜಕೀಯ ನಾಯಕರು, ಮಠಾಧೀಶರು ಹಾಗೂ ಚಿತ್ರರಂಗದ ಗಣ್ಯರೂ ಸಹ ದೇವಿಯ ದರ್ಶನ ಪಡೆದು ಭಕ್ತಿಭಾವದಿಂದ ಜಾತ್ರೆಯಲ್ಲಿ ಪಾಲ್ಗೊಂಡರು. ಹಾಸನಾಂಬೆ ಜಾತ್ರೆಗೆ ಸ್ಥಳೀಯ ಆಡಳಿತ ಮತ್ತು ಸುರಕ್ಷತಾ ತಂಡಗಳು ಸಾಕಷ್ಟು ವ್ಯವಸ್ಥೆಗಳನ್ನು ಕೈಗೊಂಡಿದ್ದು, ಭಕ್ತರಿಗೆ ಯಾವುದೇ ಅಡಚಣೆ ಇಲ್ಲದೆ ದರ್ಶನವಾಗುವಂತೆ ಮಾಡಿದ್ದಾರೆ.
ಈಗ ದೇವಾಲಯದ ಬಾಗಿಲು ಮುಚ್ಚಲ್ಪಟ್ಟಿದ್ದು, ಹಾಸನಾಂಬೆ ತಾಯಿ ದರ್ಶನಕ್ಕಾಗಿ ಭಕ್ತರು ಮುಂದಿನ ವರ್ಷ ವರೆಗೆ ಕಾಯಬೇಕಾಗುತ್ತದೆ. ವರ್ಷಕ್ಕೆ ಕೇವಲ ಒಂದು ಬಾರಿ ಮಾತ್ರ ಸಾರ್ವಜನಿಕ ದರ್ಶನಕ್ಕೆ ಬಾಗಿಲು ತೆರೆದಿರುವ ಹಾಸನಾಂಬೆ ದೇವಾಲಯ, ಭಕ್ತರ ಭಾವನಾತ್ಮಕ ತಾಣವಾಗಿ ರಾಜ್ಯದ ಧಾರ್ಮಿಕ ಪಟದಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ.