ರಾಜಸ್ಥಾನ, ಅ. 23 (DaijiworldNews/ TA): ಸವಾಯಿ ಮಾಧೋಪುರ್ ಜಿಲ್ಲೆಯ ಟೋಕ್ಸಿ ಎಂಬ ಪುಟ್ಟ ಹಳ್ಳಿಯಿಂದ ಆರಂಭವಾದ ವಂದನಾ ಮೀನಾ ಅವರ ಯಶಸ್ಸಿನ ಯಾತ್ರೆ, ಲಕ್ಷಾಂತರ ಯುವಕರಿಗೆ ಮಾದರಿಯಾಗಿದೆ. ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಯಲ್ಲಿ ಯಾವುದೇ ತರಬೇತಿ ಇಲ್ಲದೆ, ಕೇವಲ ಸ್ವಯಂ ಅಧ್ಯಯನದ ಮೂಲಕ ಅವರು ಐಎಎಸ್ ಅಧಿಕಾರಿಯಾಗಿರುವುದು ಅವರ ದೃಢನಿಶ್ಚಯ ಮತ್ತು ಪರಿಶ್ರಮದ ಪ್ರತಿಫಲವಾಗಿದೆ.

ವಂದನಾ ಬಡ ಕುಟುಂಬದಿಂದ ಬಂದವರು. ಅವರ ತಂದೆ ದೆಹಲಿ ಪೊಲೀಸ್ ಆಗಿ ಕಾರ್ಯನಿರ್ವಹಿಸುತ್ತಿದ್ದರೆ, ತಾಯಿ ಗೃಹಿಣಿ. ಬಾಲ್ಯದಿಂದಲೂ ಪ್ರತಿಭಾವಂತಳಾಗಿದ್ದ ವಂದನಾ, ಸಾರ್ವಜನಿಕ ಸೇವೆಯ ಕನಸು ಹೊತ್ತಿದ್ದರು. ತಮ್ಮ ಮಗಳ ಶಿಕ್ಷಣದ ಗುಣಮಟ್ಟವನ್ನು ಉತ್ತಮಗೊಳಿಸಲು ಕುಟುಂಬವು ದೆಹಲಿಗೆ ಸ್ಥಳಾಂತರಗೊಂಡಿತು. ಅಲ್ಲಿ ವಂದನಾ ದೆಹಲಿ ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರದಲ್ಲಿ ಪದವೀಧರರಾಗಿದ್ದು, ತದನಂತರ ಯುಪಿಎಸ್ಸಿಗೆ ತಯಾರಿ ನಡೆಸಲು ನಿಶ್ಚಯಿಸಿದರು.
ಅನುಸ್ಥಿತ ತರಗತಿಗಳಿಗಿಂತ ಸ್ವಯಂ ಅಧ್ಯಯನವೇ ಉತ್ತಮ ಎಂದು ನಂಬಿದ ವಂದನಾ, ಪ್ರತಿದಿನ 10 ರಿಂದ 15 ಗಂಟೆಗಳ ಕಾಲ ನಿರಂತರವಾಗಿ ಓದುವ ಅಭ್ಯಾಸವನ್ನು ರೂಢಿಸಿಕೊಂಡರು. ಅವರು NCERT ಪುಸ್ತಕಗಳು, ಯೂಟ್ಯೂಬ್ ಚಾನೆಲ್ಗಳು, ಆನ್ಲೈನ್ ವೇದಿಕೆಗಳು ಮತ್ತು ಪ್ರಸ್ತುತ ವಿಚಾರದ ಕುರಿತು ಪತ್ರಿಕೆಗಳನ್ನು ಓದುವ ಮೂಲಕ ತಮ್ಮನ್ನು ತಾವೇ ತಯಾರಿಸಿಕೊಂಡರು. ಟಿಪ್ಪಣಿಗಳನ್ನು ತಯಾರಿಸುವುದು, ಪ್ರಶ್ನೆಪತ್ರಿಕೆಗಳ ವಿಶ್ಲೇಷಣೆ ಮಾಡುವಂತಹ ಅಧ್ಯಯನ ಶಿಸ್ತಿನ ಅಭ್ಯಾಸಗಳು ಅವರು ಯಶಸ್ಸು ಸಾಧಿಸಲು ನೆರವಾದವು.
ವಂದನಾ ವ್ಯಕ್ತಿತ್ವವೂ ತನ್ನದೇ ಆದ ಛಾಪು ಮೂಡಿಸಿದೆ. ಯುಪಿಎಸ್ಸಿ ಪಾಸಾದವಳಾಗಿ ಮಾತ್ರವಲ್ಲ, ಅವರ ಆತ್ಮವಿಶ್ವಾಸ ಮತ್ತು ಧೈರ್ಯವು ಜನರ ಮನಸೆಳೆಯುತ್ತಿದೆ. ಅವರ ಸರಳತೆ ಮತ್ತು ಬುದ್ಧಿವಂತಿಕೆಯ ಮಿಶ್ರಣವೇ ಅವರ ನಿಜವಾದ ಶಕ್ತಿಯಾಗಿಯೇ ಗುರುತಿಸಲಾಗಿದೆ.
ವಂದನಾ ಅವರ ಉತ್ತಮ ತಂತ್ರ ಮತ್ತು ಆತ್ಮವಿಶ್ವಾಸವು UPSC CSE 2021 ರಲ್ಲಿ 331 ನೇ ಅಖಿಲ ಭಾರತ ರ್ಯಾಂಕ್ ಗಳಿಸಲು ಕಾರಣವಾಯಿತು. ಇದರೊಂದಿಗೆ ಅವರು ಐಎಎಸ್ ಅಧಿಕಾರಿಯಾಗಿ ಆಯ್ಕೆಯಾದರು. ಸಂಪನ್ಮೂಲಗಳ ಕೊರತೆಯಿದ್ದರೂ, ಕನಸು ಕಾಣುವ ಮತ್ತು ಅದನ್ನು ಸಾಧಿಸುವ ಧೈರ್ಯವನ್ನು ಹೊಂದಿರುವ ಇಂದಿನ ಅನೇಕರಿಗೆ ವಂದನಾ ಅವರ ಯಶಸ್ಸು ಸ್ಫೂರ್ತಿ.