ಗುವಾಹಟಿ, ಅ. 23 (DaijiworldNews/ TA): ಅಸ್ಸಾಂನ ಕೊಕ್ರಜಾರ್ ಜಿಲ್ಲೆಯಲ್ಲಿನ ರೈಲ್ವೆ ಹಳಿಯಲ್ಲಿ ಇಂದು ಬೆಳಗಿನ ಜಾವ ಭೀಕರ ಐಇಡಿ ಸ್ಫೋಟ ಸಂಭವಿಸಿದ್ದು, ಅಸ್ಸಾಂ ಮತ್ತು ಉತ್ತರ ಬಂಗಾಳ ನಡುವಿನ ರೈಲು ಸಂಚಾರಕ್ಕೆ ತಾತ್ಕಾಲಿಕ ಅಡ್ಡಿಯಾಗಿದೆ. ಈ ಸ್ಫೋಟದಲ್ಲಿ ಸುಮಾರು ಮೂರು ಅಡಿ ಉದ್ದದ ರೈಲ್ವೆ ಹಳಿ ಹಾನಿಗೊಳಗಾಗಿದ್ದು, ಸ್ಫೋಟದ ಶಬ್ದದಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಘಟನೆ ಕೊಕ್ರಜಾರ್ ರೈಲು ನಿಲ್ದಾಣದಿಂದ ಸಲಕಟಿ ಕಡೆಗೆ ಐದು ಕಿಲೋಮೀಟರ್ ದೂರದಲ್ಲಿ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ, ರೈಲು ಹಳಿತಪ್ಪುವ ಘಟನೆ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಕ್ರಜಾರ್ ಜಿಲ್ಲೆಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪುಷ್ಪರಾಜ್ ಸಿಂಗ್ ಮಾತನಾಡಿ, “ಹಳಿಯ ಸಣ್ಣ ಭಾಗ ಮಾತ್ರ ಹಾನಿಗೊಳಗಾಗಿತ್ತು. ಅದನ್ನು ತಕ್ಷಣವೇ ದುರಸ್ತಿ ಮಾಡಿ ಬೆಳಗ್ಗೆ 5.30ಕ್ಕೆ ರೈಲು ಸಂಚಾರವನ್ನು ಪುನರಾರಂಭಗೊಳಿಸಲಾಗಿದೆ, ಭದ್ರತಾ ಸಿಬ್ಬಂದಿ ಹಾಗೂ ರೈಲ್ವೆ ಅಧಿಕಾರಿಗಳು ಸ್ಥಳವನ್ನು ಸಂಪೂರ್ಣ ಪರಿಶೀಲಿಸಿದ್ದಾರೆ. ಘಟನೆಯ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.” ಎಂದು ತಿಳಿಸಿದ್ದಾರೆ.
ಈ ಸ್ಫೋಟದಿಂದ ಸುಮಾರು ಎಂಟರಿಂದ ಹತ್ತು ರೈಲುಗಳ ಸಂಚಾರಕ್ಕೆ ತಾತ್ಕಾಲಿಕ ತೊಂದರೆ ಉಂಟಾಗಿದೆ. ರೈಲು ಹಳಿ ಬೆಳಗ್ಗೆ 5.25ರ ಹೊತ್ತಿಗೆ ದುರಸ್ತಿ ಆಗಿದ್ದು, ಅದರ ಕೆಲವೇ ನಿಮಿಷಗಳಲ್ಲಿ ಸಂಚಾರ ಪುನರಾರಂಭಗೊಂಡಿದೆ. ಈ ಸ್ಫೋಟ ಪಿತೂರಿಯಾಗಿದೆಯೇ ಎಂಬುದರ ಕುರಿತು ಪೊಲೀಸರು ಇನ್ನೂ ತನಿಖೆ ನಡೆಸುತ್ತಿದ್ದಾರೆ. ಸ್ಫೋಟದಲ್ಲಿ ಭಾಗಿಯಾಗಿರುವವರನ್ನು ಪತ್ತೆಹಚ್ಚಿ ಬಂಧಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ.