ಬೆಂಗಳೂರು, ಜು 01(Daijiworld News/SM): ರಾಜ್ಯದ ಮುಖ್ಯಮಂತ್ರಿಗಳು ಅಮೇರಿಕಾ ಪ್ರವಾಸದಲ್ಲಿದ್ದಾರೆ. ಆದರೆ, ರಾಜ್ಯದಲ್ಲಿ ದಿನಕ್ಕೊಂದು ವಿದ್ಯಾಮಾನಗಳು ಜರಗುತ್ತಿವೆ. ಇದೀಗ ವಿಜಯನಗರ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ದಿಢೀರ್ ರಾಜೀನಾಮೆ ನೀಡಿದ್ದು, ರಾಜಕೀಯ ವಲಯದಲ್ಲಿ ಹತ್ತು ಹಲವು ಚರ್ಚೆಗೆ ಕಾರಣವಾಗಿದೆ. ಈ ನಡುವೆ ಬಿಜೆಪಿ ಎಚ್ಚೆತ್ತುಕೊಂಡಿದ್ದು, ಸರಕಾರ ರಚನೆ ಮಾಡುವ ಸುಳಿವನ್ನು ಯಡಿಯೂರಪ್ಪ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಆನಂದ್ ಸಿಂಗ್ ರಾಜೀನಾಮೆಯ ಮಾಹಿತಿ ನನಗೆ ಮಾಧ್ಯಮಗಳಿಂದಷ್ಟೇ ತಿಳಿದಿದೆ. ಬಿಜೆಪಿಯವರು ಸರಕಾರ ಬೀಳಿಸುವ ಯಾವುದೇ ಪ್ರಯತ್ನ ನಡೆಸಿಲ್ಲ. ಆದರೆ, ಮೈತ್ರಿ ಸರಕಾರದೊಳಗೆ ಸುಮಾರು 20ಕ್ಕೂ ಹೆಚ್ಚು ಮಂದಿ ಅತೃಪ್ತರಿದ್ದಾರೆ. ಸರಕಾರ ಪತನಗೊಳ್ಳುವ ಸಾಧ್ಯತೆ ಹೆಚ್ಚಿದೆ. ಒಂದೊಮ್ಮೆ ಸರ್ಕಾರ ಬಿದ್ದು ಹೋದರೆ ನಾವು ಹೊಸ ಸರ್ಕಾರ ರಚಿಸುತ್ತೇವೆ ಎಂದಿದ್ದಾರೆ.
ಅತೃಪ್ತ ಶಾಸಕರು ರಾಜೀನಾಮೆ ನೀಡಿದರೆ ನಾವು ಸರ್ಕಾರ ರಚಿಸುತ್ತೇವೆ. ಸರಕಾರ ರಚಿಸದಿರಲು ನಾವೇನು ಸನ್ಯಾಸಿಗಳೇ ಎಂದು ಬಿಎಸ್ ವೈ ಹೇಳಿದ್ದಾರೆ. ಅಲ್ಲದೆ ಎಲ್ಲರ ಸಹಕಾರದಿಂದ ರಾಜ್ಯದಲ್ಲಿ ಉತ್ತಮ ಆಡಳಿತ ನೀಡುತ್ತೇವೆ ಎಂದು ಬಿಎಸ್ ವೈ ಹೇಳಿದರು.