ನವದೆಹಲಿ, ಅ. 24 (DaijiworldNews/ TA): ಭಾರತಾಂಬೆಯ ಒಡಲಲ್ಲಿ ಸಹಸ್ರ ಭಾಷೆ ಸಹಸ್ರ ಸಂಪ್ರದಾಯ , ಆಚರಣೆಗಳು ಅಡಗಿವೆ. ಆರಾಧನೆಯ ಒರತೆಯಂತಿಹುದು ನಮ್ಮ ಜನ್ಮ ಭೂಮಿ. ಅದರಲ್ಲಿ ಒಂದು ಛತ್ ಅನ್ನೋ ಹಬ್ಬದ ಆಚರಣೆ.

ಅನಾದಿಕಾಲದಿಂದಲೂ ಸೂರ್ಯ ಚಂದ್ರರ ಆರಾಧನೆಯ ಬಗ್ಗೆ ಪೂರ್ವಜರ ಕಥಾನಕದಲ್ಲೇ ಉಲ್ಲೇಖವಾಗಿರುವಂತಹದ್ದು ನಾವು ಕಂಡಿದ್ದೇವೆ. ಭಾರತೀಯರು ಪ್ರಕೃತಿಯ ಆರಾಧಕರೂ ಎಂಬುವುದು ವಿಶ್ವಕ್ಕೆ ತಿಳಿಸಿರುವ ವಿಚಾರ. ಭುವಿಯೊಡಲ ಪೂಜಾಕ್ರಮದಲ್ಲಿಯೇ ಬರುವಂತಹದ್ದು ಈ ಛತ್ ಪೂಜೆ. ಸೂರ್ಯನ ಆರಾಧನೆಗೆ ಅರ್ಪಿಸಲಾದ ಛತ್ ಪೂಜೆಯು ಭಾರತದಲ್ಲಿ ಅತ್ಯಂತ ಪುರಾತನ ಹಾಗೂ ವೈಶಿಷ್ಟ್ಯಪೂರ್ಣ ಸೌರ ಹಬ್ಬಗಳಲ್ಲಿ ಒಂದಾಗಿದೆ. ಬಿಹಾರ, ಜಾರ್ಖಂಡ್, ಛತ್ತೀಸ್ಗಢ ಹಾಗೂ ನೇಪಾಳದ ಭಾಗಗಳಲ್ಲಿ ಹುಟ್ಟಿಕೊಂಡ ಈ ಹಬ್ಬವು ಇಂದು ಉತ್ತರ ಮತ್ತು ಪೂರ್ವ ಭಾರತದಿಂದ ಪ್ರಪಂಚದಾದ್ಯಂತ ಉತ್ಸಾಹದಿಂದ ಆಚರಿಸಲ್ಪಡುತ್ತಿದೆ.
ದೀಪಾವಳಿಯ ಆರನೇ ದಿನ ನಡೆಯುವ ಈ ಹಬ್ಬವನ್ನು ಸೂರ್ಯ ಷಷ್ಠಿ ವ್ರತ ಎಂದೂ ಕರೆಯಲಾಗುತ್ತದೆ. 'ಛತ್' ಎಂಬ ಪದವು ಸಂಸ್ಕೃತದ “ಷಷ್ಠಿ” (ಅಮಾವಾಸ್ಯೆಯ ಆರನೇ ದಿನ) ಎಂಬ ಶಬ್ದದಿಂದ ಬಂದಿದೆ. ಸೂರ್ಯ ದೇವರ ಜೊತೆಗೆ ಅವರ ಪತ್ನಿ ಛಠಿ ಮಾಯಿ ಅಂದರೆ ಉಷಾ ದೇವಿಯನ್ನು ಸಹ ಈ ಹಬ್ಬದಲ್ಲಿ ಪೂಜಿಸಲಾಗುತ್ತದೆ.
ಹಬ್ಬದ ಆಚರಣೆ ಕೂಡಾ ಬಹಳ ವಿಶೇಷವಾಗಿರುತ್ತದೆ. ಈ ಹಬ್ಬವು ನಾಲ್ಕು ದಿನಗಳ ಕಾಲ ನಡೆಯುತ್ತದೆ. ವ್ರತಸ್ಥರು ಉಪವಾಸವಿರುತ್ತಾರೆ, ನದಿತೀರದಲ್ಲಿ ಅಥವಾ ಸರೋವರದ ಬಳಿ ಸಂಜೆಯ ಸೂರ್ಯಾಸ್ತ ಮತ್ತು ಬೆಳಗಿನ ಸೂರ್ಯೋದಯ ಸಮಯದಲ್ಲಿ ಅರ್ಘ್ಯ ಅರ್ಪಿಸುತ್ತಾರೆ. ಈ ಹಬ್ಬಕ್ಕೆ ಲಿಂಗಭೇದವಿಲ್ಲ ಸ್ತ್ರೀ ಪುರುಷರು ಬಹಳ ಉತ್ಸುಕರಾಗಿಯೇ ಆಚರಣೆಯಲ್ಲಿ ತೊಡಗುತ್ತಾರೆ. ಆದರೆ ಸಾಂಪ್ರದಾಯಿಕವಾಗಿ ಸ್ತ್ರೀ ಕೇಂದ್ರಿತ ಹಬ್ಬ ಎಂದು ಪರಿಗಣಿಸಲಾಗುತ್ತದೆ. ಛಠಿ ಮಾಯಿ ಮಕ್ಕಳ ರಕ್ಷಕಿ ಮತ್ತು ದೀರ್ಘಾಯುಷ್ಯ ನೀಡುವ ದೇವತೆ ಎಂಬ ನಂಬಿಕೆ ಈ ಹಬ್ಬದ ಐತಿಹ್ಯದಲ್ಲಿ ಅಡಗಿದೆ. ಆ ಪುರಾಣ ಕಥೆಯೂ ಅಮೋಘವಾಗಿದೆ.
ಜನರು ದೀರ್ಘಾಯುಷ್ಯ, ಸಮೃದ್ಧಿ ಮತ್ತು ಯೋಗಕ್ಷೇಮಕ್ಕಾಗಿ ಉಪವಾಸ, ಪವಿತ್ರ ಸ್ನಾನ ಮಾಡಿ, ಸೂರ್ಯಾಸ್ತ ಮತ್ತು ಉದಯಿಸುತ್ತಿರುವ ಸೂರ್ಯನಿಗೆ ನಮಸ್ಕರಿಸುವ ಮೂಲಕ ಆಚರಿಸುತ್ತಾರೆ. ಛತ್ ಎಂದರೆ ಆರು, ಈ ಹಬ್ಬವನ್ನು ಕಾರ್ತಿಕ ಮಾಸದ ಆರನೇ ದಿನದಂದು ಆಚರಿಸಲಾಗುತ್ತದೆ ಎಂದು ಸೂಚಿಸುತ್ತದೆ. ಈ ದಿನ, ಭಕ್ತರು ಬೆಳಕಿನ ದೇವರಿಗೆ ಅಂದರೆ ಸೂರ್ಯನಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ.
ಬ್ರಹ್ಮಾಂಡದ ಎಲ್ಲಾ ಜೀವಿಗಳಿಗೆ ಶಕ್ತಿಯನ್ನು ನೀಡುವ ಜೀವ ಶಕ್ತಿ ಸೂರ್ಯ. ಈ ಹಿನ್ನಲೆ ಆತನ ಆರಾಧಿಸಲಾಗುತ್ತದೆ. ನಹಯ್-ಖಯ್, ಖರ್ನಾ, ಅಸ್ತಮಿಸುವ ಸೂರ್ಯನಿಗೆ ಅರ್ಘ್ಯ, ಉದಯಿಸುವ ಸೂರ್ಯನಿಗೆ ಆರ್ಘ್ಯ ಹೀಗೆ ದಿನಕ್ಕೆ ಒಂದರಂತೆ ಹಬ್ಬ ಆಚರಿಸಲಾಗುತ್ತದೆ. ಉಪವಾಸವು ಹಬ್ಬದ ಪ್ರಮುಖ ಭಾಗವಾಗಿದೆ.
ಪ್ರಾಚೀನ ವೇದಗಳ ಕಾಲದಿಂದಲೂ ಛತ್ ಪೂಜೆಯನ್ನು ನಡೆಸಲಾಗುತ್ತಿತ್ತು. ಈ ಯುಗದಲ್ಲಿ ಋಷಿಗಳು ಉಪವಾಸವನ್ನು ಮಾಡಿದ ನಂತರ ಸೂರ್ಯನ ಕಿರಣಗಳಿಂದ ಶಕ್ತಿ ಮತ್ತು ಜೀವಶಕ್ತಿಯನ್ನು ಪಡೆಯಲು ಸೂರ್ಯನ ಬೆಳಕಿಗೆ ತಮ್ಮನ್ನು ಒಡ್ಡಿಕೊಳ್ಳುವ ಮೂಲಕ ಪ್ರಾರ್ಥನೆಗಳನ್ನು ನಡೆಸುತ್ತಿದ್ದರು.
ಈ ಛತ್ ಪೂಜೆಯನ್ನು ಮೊದಲು ಸೂರ್ಯ ಮತ್ತು ಕುಂತಿಯ ಪುತ್ರ ಕರ್ಣನು ನಡೆಸಿದ್ದ ಎಂದು ಹೇಳಲಾಗುತ್ತದೆ. ಕರ್ಣನು ಅಂಗದೇಶದ ಅಧಿಪತಿಯಾಗಿದ್ದನು, ಇದು ಇಂದಿನ ಬಿಹಾರದ ಭಾಗಲ್ಪುರವಾಗಿದ್ದು, ಈ ರಾಜ್ಯದ ಜನರು ಇಂದಿಗೂ ಈ ಪೂಜೆ ಅನುಸರಿಸಿಕೊಂಡು ಬರುತ್ತಿದ್ದಾರೆ ಎನ್ನಲಾಗಿದೆ.
'ಬ್ರಹ್ಮವೈವರ್ತ ಪುರಾಣ' ಪ್ರಕಾರ, ಸೃಷ್ಟಿಕರ್ತ ಬ್ರಹ್ಮನು 'ಪ್ರಕೃತಿ' ಯನ್ನು ಆರು ಭಾಗಗಳಾಗಿ ವಿಭಜಿಸಿದಾಗ, ಆರನೇ ಭಾಗ ಛಠಿ ಅಥವಾ ದೇವಸೇನಾ ಎಂದು ಕರೆಯಲ್ಪಟ್ಟಳು. ಈ ದೇವತೆ ಮಕ್ಕಳ ರಕ್ಷಕಿಯಾಗಿ ಮತ್ತು ಫಲಪ್ರದಾತಿಯಾಗಿ ಪ್ರಸಿದ್ಧಳಾದಳು. ಜನಪ್ರಿಯ ದಂತಕಥೆಯ ಪ್ರಕಾರ, ಬಿಹಾರದ ರಾಜ ಪ್ರಿಯವ್ರತ ಮತ್ತು ರಾಣಿ ಮಾಲಿನಿಗೆ ಸಂತಾನಪ್ರಾಪ್ತಿ ಆಗದೆ ದುಃಖಗೊಂಡಾಗ, ದೇವಸೇನಾ (ಛಠಿ ಮಾಯಿ) ಅವರ ಮುಂದೆ ಪ್ರತ್ಯಕ್ಷವಾಗುತ್ತಾಳೆ. ಈ ವೇಳೆ ಸೂರ್ಯನಿಗೆ ಪೂಜಿಸಿದರೆ ಸಂತಾನಪ್ರಾಪ್ತಿಯಾಗುವುದು ಎಂದು ವರ ನೀಡಿದಳು. ಆ ಬಳಿಕ ರಾಣಿ ಸಂತಾನಪ್ರಾಪ್ತಿಯಾದಳು. ಅಂದಿನಿಂದ ಈ ಪೂಜೆ ಪ್ರಾರಂಭವಾಯಿತು ಎಂಬುವುದು ಉಲ್ಲೇಖ.
ರಾಮಾಯಣದಲ್ಲಿ, ಲಂಕಾ ಯುದ್ಧದ ಬಳಿಕ ಸೀತೆ ದೇವಿ ಪ್ರಾಯಶ್ಚಿತ್ತವಾಗಿ ಛಠ್ ವ್ರತವನ್ನು ಆಚರಿಸಿದಳು ಎಂಬ ನಂಬಿಕೆ ಇದೆ. ಮಹಾಭಾರತದಲ್ಲೂ ಸೂರ್ಯನ ಪುತ್ರ ಕರ್ಣನು ಸೂರ್ಯ ಪೂಜೆಯ ಆಚರಣೆಗಳನ್ನು ನಡೆಸಿದನೆಂಬ ಉಲ್ಲೇಖವಿದೆ. ನಂತರ ದ್ರೌಪದಿ ಮತ್ತು ಪಾಂಡವರು ಸಹ ಇದೇ ರೀತಿಯ ವ್ರತಗಳನ್ನು ಕೈಗೊಂಡರು.
ಅಷ್ಟೇ ಅಲ್ಲದೆ ಈ ಧಾರ್ಮಿಕ ಆರಾಧನೆಯು ಮುಂದುವರೆಯುತ್ತಾ ಬಂದು ಕೃಷಿಯೊಂದಿಗೆ ಕೂಡಾ ನಂಟು ಹೊಂದಿದೆ ಎಂದು ಹೇಳಲಾಗುತ್ತದೆ. ಹೌದು ಛತ್ ಪೂಜೆ ಕೇವಲ ಧಾರ್ಮಿಕ ಆಚರಣೆಯಷ್ಟೇ ಅಲ್ಲ ಇದು ಸುಗ್ಗಿಯ ನಂತರದ ಕೃತಜ್ಞತಾ ಹಬ್ಬವೂ ಆಗಿದೆ. ರೈತರು ಈ ಕಾಲದಲ್ಲಿ ಸೂರ್ಯನಿಗೆ ಕೃತಜ್ಞತೆ ಸಲ್ಲಿಸುತ್ತಾರೆ, ಏಕೆಂದರೆ ಬೆಳೆಯ ಯಶಸ್ಸು ಮತ್ತು ಸೂರ್ಯನ ಆಶೀರ್ವಾದ ಪರಸ್ಪರ ಸಂಬಂಧಿತವಾಗಿದೆ.
ಒಟ್ಟಿನಲ್ಲಿ ಛತ್ ಪೂಜೆ ಪ್ರಕೃತಿ, ಸೂರ್ಯನ ಶಕ್ತಿ ಮತ್ತು ತಾಯಿಯ ಆರೈಕೆಯ ಸಂಕೇತ. ಇದು ಭಕ್ತಿ, ಶುದ್ಧತೆ ಮತ್ತು ಸಮರ್ಪಣೆಯ ಹಬ್ಬವಾಗಿದ್ದು, 'ಸೂರ್ಯೋಪಾಸನೆ' ಮತ್ತು 'ಮಾತೃತ್ವದ ಆರಾಧನೆ' ಎರಡನ್ನೂ ಒಂದೇ ಸಮಯದಲ್ಲಿ ಒಗ್ಗೂಡಿಸುವ ಮಹತ್ತರವಾದ ಆಚರಣೆಯಾಗಿದೆ.
-ತಾರಾನವೀನ್ ಶೆಟ್ಟಿ ವರ್ಕಾಡಿ