ಬೆಂಗಳೂರು, ಅ. 24 (DaijiworldNews/ TA): ಮದ್ಯಪಾನ ಮಾಡಿ ಶಾಲಾ ಬಸ್ಗಳನ್ನು ಚಾಲನೆ ಮಾಡುವ ಚಾಲಕರಿಗೆ ಬೆಂಗಳೂರು ಸಂಚಾರ ಪೊಲೀಸರು ಬಿಗ್ ಶಾಕ್ ಕೊಟ್ಟಿದ್ದಾರೆ. ಇಂದು ಮುಂಜಾನೆ ಕಾರ್ಯಪ್ರವೃತ್ತರಾದ ಪೊಲೀಸ್ ಪಡೆ 7 ಗಂಟೆಯಿಂದ 9.30ರ ವರೆಗೆ ನಗರದ ವಿವಿಧೆಡೆ ಶಾಲಾ ಬಸ್ ಚಾಲಕರ ತಪಾಸಣೆ ಮಾಡಿ, ಒಟ್ಟು 5,881 ಡ್ರೈವರ್ಗಳನ್ನು ಪರೀಕ್ಷಿಸಿದ್ದಾರೆ. ಈ ವೇಳೆ 36 ಚಾಲಕರು ಮದ್ಯ ಸೇವಿಸಿ ಬಸ್ ಚಾಲನೆ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು ಅವರ ವಿರುದ್ಧ ಪ್ರಕರಣ ದಾಕಲಿಸಿ, ಡಿಎಲ್ ರದ್ದುಪಡಿಸುವಂತೆ ಆರ್ಟಿಓಗೆ ಸಂಚಾರಿ ಪೊಲೀಸರು ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ.

ಕಳೆದ ಕೆಲ ವರ್ಷಗಳ ಅಂಕಿ ಅಂಶಗಳ ಪ್ರಕಾರವಾಗಿ ಮದ್ಯಪಾನ ಮಾಡಿ ಶಾಲಾ ವಾಹನ ಚಲಾಯಿಸುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ ಎಂದು ಹೇಳಲಾಗಿದೆ. 2023ರಲ್ಲಿ 8 ಕೇಸ್, 2024ರಲ್ಲಿ 139 ಪ್ರಕರಣ ದಾಖಲಾಗಿದ್ದರೆ 2025ರ ಮೊದಲಾರ್ಧದಲ್ಲೇ (ಜೂನ್ 2025ರ ವರೆಗೆ) 67 ಪ್ರಕರಣಗಳು ವರದಿಯಾಗಿವೆ. ಈ ಹಿನ್ನಲೆ ಶಾಲಾ ಬಸ್ಗಳಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳ ಸುರಕ್ಷತಾ ದೃಷ್ಟಿಯಿಂದ ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಪಶ್ಚಿಮ ವಿಭಾಗದ ಸಂಚಾರ ಡಿಸಿಪಿ ಅನೂಪ್ ಶೆಟ್ಟಿ ಪ್ರತಿಕ್ರಿಯಿಸಿ, “ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರ ಸೂಚನೆಯಂತೆ ಈ ಕಾರ್ಯಾಚರಣೆ ನಡೆಸಲಾಗಿದೆ. ಕೆಲವರು ಕುಡಿದು ವಾಹನ ಚಲಾಯಿಸುತ್ತಿರುವುದು ಪತ್ತೆಯಾಗಿದೆ. ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ,” ಎಂದು ಹೇಳಿದ್ದಾರೆ.
ಒಟ್ಟಾರೆ ಈ ಅಂಕಿಅಂಶಗಳು ಮಕ್ಕಳ ಸುರಕ್ಷತೆಯ ಬಗ್ಗೆ ಪಾಲಕರಲ್ಲಿ ಆತಂಕ ಉಂಟುಮಾಡಿವೆ. ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.