ಮುಂಬಯಿ, ಜು02(Daijiworld News/SS): ಸಮಾಜದಲ್ಲಿನ ಹಿಂದುಳಿದವರ ಬಡವರ ಶಿಕ್ಷಣಕ್ಕೆ ಇರುವ ಆರ್ಥಿಕ ಕೊರತೆಯನ್ನು ನೀಗಿಸಬೇಕು ಎಂದು ರಜಕ ಸಂಘದ ಅಧ್ಯಕ್ಷ ದಾಸು ಸಿ.ಸಾಲಿಯಾನ್ ಹೇಳಿದರು.
ರಜಕ ಸಂಘವು ತನ್ನ 82ನೇ ವಾರ್ಷಿಕ ಮಹಾಸಭೆಯನ್ನು ದಾದರ್ ಪೂರ್ವದಲ್ಲಿನ ಕೊಹಿನೂರ್ ಭವನ್ ಸಭಾಗೃಹದಲ್ಲಿ ಹಮ್ಮಿಕೊಂಡ ಸಂದರ್ಭ ದಾಸು ಸಿ.ಸಾಲಿಯಾನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಮ್ಮ ಹಿರಿಯರ ದೂರದೃಷ್ಟಿತ್ವದ ಫಲದಿಂದ ಸಂಸ್ಥೆಯನ್ನು ಸ್ಥಾಪಿಸಲಾಗಿದ್ದು, ಭವಿಷ್ಯದ ಯುವಪೀಳಿಗೆಗೆ ನಮ್ಮ ಕೊಡುಗೆ ಅವಶ್ಯಕತೆಯಿದೆ. ಈ ಸಂಘದ ಏಳಿಗೆಗೆ ಸದಸ್ಯರಿಂದ ದೊರೆತ ಸಹಕಾರ ಪ್ರೋತ್ಸಾಹಕ್ಕೆ ನಾನು ಚಿರಋಣಿ. ಸಂಘದ ನಿಧಿ ಸಂಗ್ರಹವನ್ನು ಇನ್ನಷ್ಟು ಏರಿಕೆ ಮಾಡಿ ಸಮಾಜದಲ್ಲಿ ಹಿಂದುಳಿದವರ ಬಡವರ ಶಿಕ್ಷಣಕ್ಕೆ ಇರುವ ಆರ್ಥಿಕ ಕೊರತೆಯನ್ನು ನೀಗಿಸಬೇಕು ಎಂದು ಸಲಹೆ ನೀಡಿದರು.
ಸಂಘದ ನಿಕಟಪೂರ್ವ ಅಧ್ಯಕ್ಷ ಸತೀಶ್ ಎಸ್. ಸಾಲಿಯಾನ್ ಮಾತನಾಡಿ, ಸಂಘವು ಸರಿಯಾದ ದಿಕ್ಕಿನಲ್ಲಿ ಸಾಗಬೇಕಾದರೆ ಎಲ್ಲರ ಸಹಕಾರ ಮುಖ್ಯ. ರಜಕರಲ್ಲಿ ಇಂತಹ ಸಮಾನತೆ, ಮುನ್ನಡತೆಯ ಮನೋಭಾವ ಮೂಡುತ್ತಿದ್ದು, ಇದು ಸಮಾಜೋನ್ನತಿಗೆ ಪ್ರೇರಕವಾಗುತ್ತಿದೆ ಎಂದರು.
ಈ ವೇಳೆ, ಸಂಘದ ಉಪಾಧ್ಯಕ್ಷ ವಿಜಯ್ ವಿ. ಕುಂದರ್, ಜೊತೆ ಕೋಶಾಧಿಕಾರಿ ಜಯ ಕೆ. ಪಡುಬಿದ್ರಿ ಮತ್ತು ಮಹಿಳಾ ವಿಭಾಗಧ್ಯಕ್ಷೆ ಪ್ರವೀಣಾ ಕುಂದರ್, ಯುವ ರಜಕ ವಿಭಾಗಧ್ಯಕ್ಷ ಮನೀಷ್ ಕುಂದರ್ ಉಪಸ್ಥಿತರಿದ್ದರು.
ಸಮಾಜದ ವಿವಿಧ ಕ್ಷೇತ್ರದ ಸಾಧನೆ ಮಾಡಿದ ದೆಹಲಿ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಎಸ್.ಕುಂದರ್, ಕೋಲಾಪುರ ಆದಾಯ ತೆರಿಗೆ ಇಲಾಖಾ ಸಹ ಅಧಿಕಾರಿ ಶಿವನಂದ ಕಲಕೇರಿ (ಐಆರೆಸ್), ಅಂತರಾಷ್ಟ್ರೀಯ ಅಥ್ಲೆಟಿಕ್ ಸತೀಶ್ ಗುಜರನ್, ಕಾಮನ್ ವೆಲ್ತ್ ಗೇಮ್ಸ್ನ ಕರಾಟೆ ಸ್ವರ್ಣ ಪದಕ ವಿಜೇತ ವರುಣ್ ಡಿ.ಗುಜರನ್, ನೆಲ್ಸನ್ ಮಂಡೇಲಾ ಪ್ರಶಸ್ತಿ ವಿಜೇತೆ ಭರತನಾಟ್ಯ ಕಲಾವಿದೆ ಸಮೃದ್ಧಿ ಎಸ್.ಸಾಲಿಯಾನ್, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕರಾಟೆ ಪ್ರಶಸ್ತಿ ವಿಜೇತೆ ನಿದೀಶಾ ಹೆಚ್.ಸಾಲಿಯಾನ್, ಮಾಡೆಲಿಂಗ್ ಕ್ಷೇತ್ರದ ರಾಷ್ಟ್ರೀಯ ಪ್ರಶಸ್ತಿ ವಿಜೇತೆ ನೇಹಾ ಪಿ.ಸಾಲಿಯಾನ್ ಮತ್ತು ಸುಮಾರು ಹತ್ತಾರು ನವ ದಂಪತಿ ಜೋಡಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಸುಮಿತಾ ಸಾಲ್ಯಾನ್, ಶಶಿಧರ ಸಾಲ್ಯಾನ್, ಡಿ.ಆರ್ ಸಾಲ್ಯಾನ್, ಪ್ರಭಾಕರ ಸಾಲ್ಯಾನ್, ಸಂಜೀವ ಸಾಲ್ಯಾನ್, ಪ್ರಕಾಶ್ ಕೆ.ಗುಜರನ್, ಭಾಸ್ಕರ್ ಕುಂದರ್, ಸುಂದರ್ ಎಚ್.ಮಡಿವಾಳ್, ಅಂತರಿಕ ಲೆಕ್ಕಪರಿಶೋಧಕರಾದ ಪೂವಣಿ ಎಸ್.ಸಾಲ್ಯಾನ್, ಸಿಎ| ಪ್ರದೀಪ್ ಕುಂದರ್ ಮತ್ತು ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಶಾಂತಿ ಸಾಲ್ಯಾನ್, ಕಾರ್ಯದರ್ಶಿ ಬಾನುಮತು ಬುನ್ನಾನ್, ಯುವ ವಿಭಾಗದ ಉಪಾಧ್ಯಕ್ಷ ಸ್ಪರ್ಷ ಸಾಲ್ಯಾನ್, ಕಾರ್ಯದರ್ಶಿ ಸಂಜೀತ್ ಕುಂದರ್, ಮಹಿಳಾ, ಯುವ ರಜಕ ವಿಭಾಗಗಳ, ಸಂಘದ ವಿವಿಧ ಪ್ರಾದೇಶಿಕ ಸ್ಥಳೀಯ ಸಮಿತಿಗಳ ಮುಖ್ಯಸ್ಥರು ಹಾಗೂ ಪದಾಧಿಕಾರಿಗಳು, ಸದಸ್ಯರನೇಕರು ಹಾಜರಿದ್ದರು.
ಗೌರವ ಕಾರ್ಯದರ್ಶಿ ಸುಮಿತ್ರಾ ಆರ್.ಪಲಿಮಾರ್ ಸ್ವಾಗತಿಸಿ, ಕೋಶಾಧಿಕಾರಿ ಸುಭಾಷ್ ಕುಂದರ್ ಲೆಕ್ಕಪತ್ರ ಮಂಡಿಸಿದರು. ಜೊತೆ ಕಾರ್ಯದರ್ಶಿ ಕಿರಣ್ ಕುಂದರ್ ವಂದಿಸಿದರು.