ಮುಂಬೈ, ಅ. 25 (DaijiworldNews/AA): ಹಿರಿಯ ಬಾಲಿವುಡ್ ಮತ್ತು ಟಿವಿ ನಟ ಸತೀಶ್ ಶಾ(74) ಅವರು ಕಿಡ್ನಿ ವೈಫಲ್ಯದಿಂದ ನಿಧನರಾಗಿದ್ದಾರೆ.

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಸತೀಶ್ ಶಾ ಅವರು, ಇತ್ತೀಚೆಗಷ್ಟೇ ಅಂಗಾಂಗ ಕಸಿ ಶಸ್ತçಚಿಕಿತ್ಸೆಗೆ ಒಳಗಾಗಿದ್ದರು. ಶನಿವಾರ ಸತೀಶ್ ಶಾ ಅವರು ಚಿಕಿತ್ಸೆ ಫಲಿಸದೆ ಮಧ್ಯಾಹ್ನ 2:30 ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಇನ್ನು ಭಾನುವಾರ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.
ನಿರ್ದೇಶಕ ಅಶೋಕ್ ಪಂಡಿತ್ ಅವರು ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊ ಹಂಚಿಕೊಳ್ಳುವ ಮೂಲಕ ಅವರ ಸಾವಿನ ಸುದ್ದಿಯನ್ನು ದೃಢಪಡಿಸಿದ್ದಾರೆ. "ನಮ್ಮ ಆತ್ಮೀಯ ಸ್ನೇಹಿತ ಮತ್ತು ಶ್ರೇಷ್ಠ ನಟ ಸತೀಶ್ ಶಾ ಕೆಲವು ಗಂಟೆಗಳ ಹಿಂದೆ ಮೂತ್ರಪಿಂಡ ವೈಫಲ್ಯದಿಂದ ನಿಧನರಾದರು ಎಂದು ತಿಳಿಸಲು ದುಃಖ ಮತ್ತು ಆಘಾತವಾಗಿದೆ. ಅವರನ್ನು ಹಿಂದೂಜಾ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಕೊನೆಯುಸಿರೆಳೆದರು. ನಮ್ಮ ಚಿತ್ರರಂಗಕ್ಕೆ ದೊಡ್ಡ ನಷ್ಟ. ಓಂ ಶಾಂತಿ" ಎಂದು ತಿಳಿಸಿದ್ದಾರೆ.
ಸತೀಶ್ ಶಾ ಅವರು ಸಾರಾಭಾಯಿ ವರ್ಸಸ್ ಸಾರಾಭಾಯಿ, ಜಾನೆ ಭಿ ದೋ ಯಾರೋ, ಮೈ ಹೂಂ ನಾ, ಮತ್ತು ಕಲ್ ಹೋ ನಾ ಹೋ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.