ಮುಂಬೈ, ಅ. 25 (DaijiworldNews/AA): ಪತ್ನಿಯೊಂದಿಗೆ ಜಗಳ ಮಾಡಿಕೊಂಡು ವ್ಯಕ್ತಿಯೊಬ್ಬ ತನ್ನ ಅವಳಿ ಮಕ್ಕಳ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ಸಂಭವಿಸಿದೆ.

ವಾಶಿಮ್ ಜಿಲ್ಲೆಯ ನಿವಾಸಿ ರಾಹುಲ್ ಚವಾಣ್ ಕೊಲೆ ಆರೋಪಿ.
ಆರೋಪಿ ಚವಾಣ್ ತನ್ನ ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದಾಗ ದಂಪತಿ ನಡುವೆ ತೀವ್ರ ವಾಗ್ವಾದ ನಡೆದಿದೆ. ಜಗಳದ ಬಳಿಕ ಆತನ ಪತ್ನಿ ತನ್ನ ತವರು ಮನೆಗೆ ಹೋಗಿದ್ದಾರೆ. ಆದರೆ, ಚವಾಣ್ ತನ್ನ ಹೆಣ್ಣುಮಕ್ಕಳೊಂದಿಗೆ ಏಕಾಂಗಿಯಾಗಿ ಪ್ರಯಾಣ ಮುಂದುವರಿಸಿದ್ದಾನೆ. ನಂತರ ಮಕ್ಕಳನ್ನು ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ಅವರ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಬಳಿಕ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
ಕೋಪದಿಂದ ಚವಾಣ್ ಅವಳಿ ಮಕ್ಕಳನ್ನು ಬುಲ್ಧಾನಾ ಜಿಲ್ಲೆಯ ಅಂಚಾರ್ವಾಡಿಯಲ್ಲಿರುವ ಅರಣ್ಯ ಪ್ರದೇಶಕ್ಕೆ ಕರೆದೊಯ್ದು, ಅಲ್ಲಿ ಅವರ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಮಕ್ಕಳ ಮೃತದೇಹವನ್ನು ವಶಕ್ಕೆ ಪಡೆದಿದೆ. ಪ್ರಾಥಮಿಕ ತನಿಖೆಯಲ್ಲಿ ಮಕ್ಕಳ ಮೃತದೇಹ ಭಾಗಶಃ ಸುಟ್ಟುಹೋಗಿವೆ ಎಂದು ತಿಳಿದುಬಂದಿದೆ. ಕೊಲೆ ನಂತರ ಚವಾಣ್ ಬೆಂಕಿ ಹಚ್ಚುವ ಮೂಲಕ ಸಾಕ್ಷ್ಯಗಳನ್ನು ನಾಶಮಾಡಲು ಪ್ರಯತ್ನಿಸಿರಬಹುದು ಎಂದು ಶಂಕಿಸಲಾಗಿದೆ.
ಮಕ್ಕಳ ಮೃತದೇಹವನ್ನು ಸುಟ್ಟು ಹಾಕಲಾಗಿದೆಯೇ ಎಂಬ ಅಂಶ ಪೊಲೀಸರ ತನಿಖೆಯ ಬಳಿಕ ತಿಳಿದುಬರಬೇಕಿದೆ. ಮಕ್ಕಳನ್ನು ಕೊಂದ ಬಳಿಕ ಸುಟ್ಟು ಹಾಕಲಾಗಿದೆಯೇ ಎಂಬುದು ಎಫ್ಎಸ್ಎಲ್ ಮತ್ತು ಮರಣೋತ್ತರ ಪರೀಕ್ಷೆ ನಂತರ ತಿಳಿಯಲಿದೆ. ಪೊಲೀಸರು ಸ್ಥಳದಲ್ಲೇ ಪರಿಶೀಲನೆ ನಡೆಸಿ, ಪ್ರದೇಶದಿಂದ ವಿಧಿವಿಜ್ಞಾನ ಮಾದರಿಗಳನ್ನು ಸಂಗ್ರಹ ಮಾಡಿದ್ದಾರೆ.