ಉತ್ತರ ಪ್ರದೇಶ, ಅ. 26 (DaijiworldNews/AA): ಯುಪಿಎಸ್ಸಿ ಪರೀಕ್ಷೆಯು ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಲಕ್ಷಾಂತರ ಅಭ್ಯರ್ಥಿಗಳು ಈ ಪರೀಕ್ಷೆಯಲ್ಲಿ ಉತ್ತೀರ್ಣವಾಗಲು ಪ್ರಯತ್ನಿಸುತ್ತಾರೆ. ಆದರೆ ಕೆಲವರು ಮಾತ್ರ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಯಶಸ್ವಿಯಾಗುತ್ತಾರೆ. ಮೊದಲ ಎರಡು ಪ್ರಯತ್ನಗಳಲ್ಲಿ ವಿಫಲರಾಗಿ, ನಂತರ ಮೂರನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ ಐಎಎಸ್ ರೂಪಲ್ ರಾಣಾ ಅವರ ಸ್ಫೂರ್ತಿದಾಯಕ ಕಥೆ ಇದು.

ಉತ್ತರ ಪ್ರದೇಶದ ಬಾಗ್ಪತ್ ಜಿಲ್ಲೆಯಲ್ಲಿ ಹುಟ್ಟಿ ಬೆಳೆದ ರೂಪಲ್ ರಾಣಾ ಅವರು ಜೆಪಿ ಪಬ್ಲಿಕ್ ಸ್ಕೂಲ್, ಬಾಗ್ಪತ್ನಲ್ಲಿ 10ನೇ ತರಗತಿಯನ್ನು ಪೂರ್ಣಗೊಳಿಸಿದರು. ನಂತರ ರಾಜಸ್ಥಾನದ ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್, ಪಿಲಾನಿಯಿಂದ 11 ಮತ್ತು 12ನೇ ತರಗತಿಗಳನ್ನು ಮುಗಿಸಿದರು. ಅವರು ದೆಹಲಿ ವಿಶ್ವವಿದ್ಯಾಲಯದ ದೇಶಬಂಧು ಕಾಲೇಜಿನಿಂದ ಬಿ.ಎಸ್ಸಿ ಪದವಿ ಪಡೆದರು ಮತ್ತು ವಿಶ್ವವಿದ್ಯಾಲಯದ ಟಾಪರ್ ಆಗಿದ್ದರು.
ರೂಪಲ್ ಅವರ ತಂದೆ, ಜಸ್ವೀರ್ ರಾಣಾ, ದೆಹಲಿ ಪೊಲೀಸ್ನಲ್ಲಿ ಸಹಾಯಕ ಸಬ್-ಇನ್ಸ್ಪೆಕ್ಟರ್ (ಎಎಸ್ಐ) ಆಗಿದ್ದು, ಅವರು ತಮ್ಮ ಮಗಳು ತಮ್ಮ ಕನಸುಗಳನ್ನು ಬೆನ್ನಟ್ಟಲು ಪ್ರೋತ್ಸಾಹಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. ಅವರ ತಾಯಿ, ದಿವಂಗತ ಅಂಜು ರಾಣಾ, ರೂಪಲ್ಗೆ ಅತಿದೊಡ್ಡ ಪ್ರೋತ್ಸಾಹಕರಾಗಿದ್ದರು ಮತ್ತು ರೂಪಲ್ ಐಎಎಸ್ ಅಧಿಕಾರಿಯಾಗಿ ತಮ್ಮ ಕುಟುಂಬಕ್ಕೆ ಕೀರ್ತಿ ತರಬೇಕೆಂದು ಬಯಸಿದ್ದರು.
ಮೊದಲ ಎರಡು ಬಾರಿ ಯುಪಿಎಸ್ಸಿ ಪರೀಕ್ಷೆಯಲ್ಲಿ ರೂಪಲ್ ಅವರು ಉತ್ತೀರ್ಣರಾಗಲು ವಿಫಲರಾದರು. ಆದರೆ ಅವರು ಛಲ ಬಿಡದೇ ಕಠಿಣ ಪರಿಶ್ರಮದಿಂದ ಮೂರನೇ ಪ್ರಯತ್ನಕ್ಕಾಗಿ ಸಿದ್ಧರಾದರು. ದುರದೃಷ್ಟವಶಾತ್, ಈ ಸಮಯದಲ್ಲಿ ಅವರ ತಾಯಿ ಗಂಭೀರವಾಗಿ ಅಸ್ವಸ್ಥರಾಗಿದ್ದರು, ಮತ್ತು ರೂಪಲ್ ತಾಯಿಯ ಆರೈಕೆಯ ಜೊತೆಗೆ ತಮ್ಮ ತಯಾರಿಯನ್ನು ಸಮತೋಲನಗೊಳಿಸಬೇಕಾಯಿತು.
ಇಷ್ಟೆಲ್ಲಾ ಸವಾಲುಗಳ ನಡುವೆಯೂ, ರೂಪಲ್ ಅವರು 2023 ರ ಯುಪಿಎಸ್ಸಿ ಪರೀಕ್ಷೆಯಲ್ಲಿ 26ನೇ ರ್ಯಾಂಕ್ನೊಂದಿಗೆ ಉತ್ತೀರ್ಣವಾದರು. ರೂಪಲ್ ರಾಣಾ ಅವರು ಈಗ 2024ರ ಬ್ಯಾಚ್ನ ಐಎಎಸ್ ಅಧಿಕಾರಿಗಳಾಗಿದ್ದಾರೆ.