ಬೆಂಗಳೂರು, ಜು02(Daijiworld News/SS): ಯಾರೂ ಗಾಬರಿಯಾಗುವ ಅಗತ್ಯವಿಲ್ಲ, ಸರ್ಕಾರ ಪೂರ್ತಿ ಅವಧಿಯನ್ನು ಪೂರೈಸುತ್ತದೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಶಾಸಕರ ಮನವೊಲಿಸುವ ಸನ್ನಿವೇಶವೂ ಬಂದಿಲ್ಲ. ನಾವು ಕಾಂಗ್ರೆಸ್ನಲ್ಲೇ ಉಳಿಯಬೇಕು. ಸರ್ಕಾರವನ್ನು ಉಳಿಸಬೇಕು ಎಂಬುದು ಪ್ರತಿಯೊಬ್ಬ ಶಾಸಕನ ಅಭಿಪ್ರಾಯವಾಗಿದೆ ಎಂದು ತಿಳಿಸಿದರು.
ಯಾರು ಯಾವ ಆಟ ಆಡುತ್ತಿದ್ದಾರೆ ಎಂಬುದು ನಮಗೆ ಗೊತ್ತು. ಬಿಜೆಪಿ ಏನು ಮಾಡುತ್ತಿದೆ, ಯಾರು ಏನು ಮಾತನಾಡುತ್ತಿದ್ದಾರೆ ಎಲ್ಲವೂ ಗೊತ್ತು. ನಾವ್ಯಾರೂ ಕಣ್ಣುಮುಚ್ಚಿಕೊಂಡು ರಾಜಕಾರಣ ಮಾಡುತ್ತಿಲ್ಲ. ನೋಡೋಣ ಎಲ್ಲದಕ್ಕೂ ಒಂದು ಔಷಧ ಇದ್ದೇ ಇದೆ ಎಂದು ಹೇಳಿದರು.
ಮೈತ್ರಿ ಸರ್ಕಾರದಲ್ಲಿ ಗೊಂದಲಗಳಿದ್ದರೂ ದಿನೇಶ್ ಗುಂಡೂರಾವ್ ವಿದೇಶ ಪ್ರವಾಸದಲ್ಲಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ದಿನೇಶ್ ಗುಂಡೂರಾವ್ ಖಾಸಗಿ ಕಾರ್ಯಕ್ರಮಕ್ಕಾಗಿ ವಿದೇಶಕ್ಕೆ ತೆರಳಿದ್ದಾರೆ. ಅವರಿಗೆ ಮೈತ್ರಿ ಸರ್ಕಾರ ಸುಭದ್ರವಾಗಿದೆ ಎಂಬ ಬಗ್ಗೆ ನಂಬಿಕೆ ಇದೆ. ದಿನೇಶ್ ಗುಂಡೂರಾವ್ ಅವರಿಗೆ ವೈಯಕ್ತಿಕ ಜೀವನ ಬೇಕಲ್ಲ. ಎಲ್ಲರೂ ಡಿ.ಕೆ.ಶಿವಕುಮಾರ್ ಆಗಬೇಕು ಎಂದೇನಿಲ್ಲ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಆನಂದ್ ಸಿಂಗ್ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ಅವರು, ಆನಂದ್ ಸಿಂಗ್ ನನಗೆ ಮೊದಲಿನಿಂದಲೂ, ಈಗಲೂ ಆತ್ಮೀಯರು. ಅವರು ಖಂಡಿತ ರಾಜೀನಾಮೆ ವಾಪಸ್ ಪಡೆಯುತ್ತಾರೆ ಎಂಬ ನಂಬಿಕೆ, ಭರವಸೆ ನನಗಿದೆ. ಅವರ ರಾಜೀನಾಮೆಯನ್ನು ಮತ್ತೊಮ್ಮೆ ಪರಿಶೀಲನೆ ಮಾಡಲಾಗುವುದು ಎಂದು ಹೇಳಿದರು.
ಮೈತ್ರಿ ಸರ್ಕಾರದಲ್ಲಿ ರಾಜೀನಾಮೆ ಪರ್ವ ಶುರುವಾಗಿದ್ದು, ಇನ್ನೂ ಕೆಲವು ಶಾಸಕರು ಶೀಘ್ರವೇ ರಾಜೀನಾಮೆ ನೀಡುತ್ತಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.