ಕೊಯಮತ್ತೂರ್, ಜು 02 (Daijiworld News/MSP): ಸ್ವದೇಶಿ ನಿರ್ಮಿತ ಯುದ್ಧ ವಿಮಾನ 'ತೇಜಸ್ ' ಆಕಾಶದಲ್ಲಿ ಹಾರಾಡುತ್ತಿದ್ದಂತೆ ವಿಮಾನದ ಇಂಧನ ಟ್ಯಾಂಕ್ ಬೇರ್ಪಟ್ಟು ರೈತನೋರ್ವನ ಜಮೀನಿಗೆ ಬಿದ್ದಿರುವ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.
ಜು.02 ರ ಮಂಗಳವಾರ ಬೆಳಗಿನ ಜಾವ ಕೊಯಮತ್ತೂರಿನ ಹೊರವಲಯದಲ್ಲಿರುವ ಇಡುಗೂರ್ ಗ್ರಾಮದ ಕೃಷಿ ಭೂಮಿಯಲ್ಲಿ ವಿಮಾನದ ಇಂಧನ ಟ್ಯಾಂಕ್ ಬಿದ್ದಿರುವುದಾಗಿ ಪೊಲೀಸರು ಹೇಳಿದ್ದಾರೆ. ಈ ಘಟನೆಯಿಂದ ಯಾವುದೇ ಸಾವು ನೋವಿನ ವರದಿಯಾಗಿಲ್ಲ.
ಹಾರಾಡುತ್ತಿದ್ದ ಯುದ್ದ ವಿಮಾನದಿಂದ ಏಕಾಏಕಿ 1200 ಲೀಟರ್ ಸಾಮರ್ಥ್ಯದ ಪೆಟ್ರೋಲ್ ತುಂಬಿದ ಟ್ಯಾಂಕ್ ಕಳಚಿ ಬೀಳುತ್ತಿರುವುದನ್ನು ನೋಡಿ ಸ್ಥಳೀಯರು ಗಾಬರಿಗೊಳಗಾಗಿದ್ದರು.
ಇಂಧನದ ಟ್ಯಾಂಕ್ ಮೇಲಿನಿಂದ ಕೆಳಕ್ಕೆ ಜಮೀನಿನಲ್ಲಿ ಸುಮಾರು ಮೂರಡಿ ಆಳದ ಗುಂಡಿ ಉಂಟಾಗಿದೆ. ಮಾತ್ರವಲ್ಲದೆ ಕಳಚಿ ಬೀಳುತ್ತಿರುವ ಸಮಯದಲ್ಲಿ ಇಂಧನ ಟ್ಯಾಂಕ್ ನಲ್ಲಿ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇಂಧನ ಟ್ಯಾಂಕ್ ಕಳಚಿ ಬಿದ್ದರೂ ತೇಜಸ್ ಯುದ್ಧ ವಿಮಾನ ಸ್ಥಳೀಯ ಸೂಳೂರ್ ವಾಯುನೆಲೆಯಲ್ಲಿ ಸುರಕ್ಷಿತವಾಗಿ ಇಳಿದೆ.
ಈ ಹಿಂದೆ ತೇಜಸ್ ಯುದ್ದ ವಿಮಾನವೂ ಸುಮಾರು 1,900 ಕಿಲೋ ಇಂಧನವನ್ನು 20,000 ಅಡಿ ಎತ್ತರದಲ್ಲಿ ಇನ್ನೊಂದು ಏರ್ಕ್ರಾಫ್ಟ್ ಗೆ ವರ್ಗಾಯಿಸುವುದರಲ್ಲಿ ಯಶಸ್ವಿಯಾಗಿತ್ತು. ಮಿಡ್ ಏರ್ ಮರುಪೂರಣ ಟ್ಯಾಂಕರ್ ಬಳಸಿ ಈ ಇಂಧನ ವರ್ಗಾವಣೆ ಮಾಡಲಾಗಿತ್ತು. ಇದು ಭಾರತದ ಮಹತ್ವದ ಸಾಧನೆಗಳಲ್ಲಿ ಒಂದಾಗಿತ್ತು.