ನವದೆಹಲಿ, ಅ. 31(DaijiworldNews/TA): ಪ್ರತಿ ವರ್ಷ ಅಕ್ಟೋಬರ್ 31ರಂದು ದೇಶದಾದ್ಯಂತ ರಾಷ್ಟ್ರೀಯ ಏಕತಾ ದಿವಸ್ ಅಥವಾ ರಾಷ್ಟ್ರೀಯ ಐಕ್ಯತಾ ದಿನವನ್ನು ಆಚರಿಸಲಾಗುತ್ತದೆ. ಭಾರತದ ಅಖಂಡತೆ ಮತ್ತು ಏಕತೆಯ ಸಂಕೇತವಾಗಿರುವ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನದ ಗೌರವಾರ್ಥವಾಗಿ 2014ರಲ್ಲಿ ಈ ಆಚರಣೆ ಪ್ರಾರಂಭವಾಯಿತು.

ಭಾರತದ ಏಕೀಕರಣದ ಶಿಲ್ಪಿ : ಸರ್ದಾರ್ ಪಟೇಲ್ ಅವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅಗ್ರಪಂಕ್ತಿಯ ನಾಯಕರಾಗಿದ್ದರು. 1928ರ ಬಾರ್ಡೋಲಿ ಸತ್ಯಾಗ್ರಹದ ವೇಳೆ ತೋರಿದ ಧೈರ್ಯ ಮತ್ತು ದೃಢತೆಗೆ ಮಾರುಹೋದ ವನಿತೆಯರು ಅವರಿಗೆ "ಸರ್ದಾರ್" ಎಂಬ ಬಿರುದನ್ನು ನೀಡಿದರು. ಸ್ವಾತಂತ್ರ್ಯ ನಂತರ ದೇಶದ ಸುಮಾರು 550 ಸಂಸ್ಥಾನಗಳನ್ನು ಒಂದೇ ಅಖಂಡ ಭಾರತಕ್ಕೆ ಸೇರಿಸುವಲ್ಲಿ ಅವರು ತೋರಿದ ಕೌಶಲ್ಯ ಮತ್ತು ದೃಢ ನಿಶ್ಚಯ ಅವರನ್ನು “ಉಕ್ಕಿನ ಮನುಷ್ಯ”ನನ್ನಾಗಿ ಮಾಡಿತು. ವೃತ್ತಿಯಲ್ಲಿ ಖ್ಯಾತ ವಕೀಲರಾಗಿದ್ದ ಪಟೇಲ್ ಅವರು ಸ್ವತಂತ್ರ ಭಾರತದ ಮೊದಲ ಗೃಹ ಸಚಿವರು ಮತ್ತು ಉಪಪ್ರಧಾನಿಯಾಗಿದ್ದರು.
ಏಕತೆಯ ವಿಗ್ರಹ : ಪಟೇಲ್ ಅವರ ಸಾಧನೆಗಳನ್ನು ಸ್ಮರಿಸುವ ಸಲುವಾಗಿ, 2018ರ ಅಕ್ಟೋಬರ್ 31ರಂದು ಪ್ರಧಾನಿ ನರೇಂದ್ರ ಮೋದಿ ಅವರು ಏಕತೆಯ ಮೂರ್ತಿಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ನರ್ಮದಾ ನದಿ ತೀರದ ಕೇವದಿಯಾ ಗುಜರಾತ್ ನಲ್ಲಿ ನಿರ್ಮಿಸಲಾದ ಈ ವಿಗ್ರಹವು ಜಗತ್ತಿನ ಅತಿ ಎತ್ತರದ ಪ್ರತಿಮೆ 182 ಮೀಟರ್ ಎತ್ತರದಲ್ಲಿ ತಲೆ ಎತ್ತಿದೆ.
ವಿಗ್ರಹದ ವಿಶೇಷತೆಗಳು:
ಕೇವಲ 33 ತಿಂಗಳಲ್ಲಿ ನಿರ್ಮಾಣ ಪೂರ್ಣಗೊಂಡಿದೆ.
153 ಮೀಟರ್ ಎತ್ತರದಲ್ಲಿ ವೀಕ್ಷಣಾ ಗ್ಯಾಲರಿ, 200 ಮಂದಿ ಏಕಕಾಲದಲ್ಲಿ ನೋಟ ವೀಕ್ಷಿಸಲು ಅವಕಾಶ.
ಸೆಕೆಂಡಿಗೆ 60 ಕಿ.ಮೀ. ಗಾಳಿಯ ವೇಗ ಮತ್ತು 6.5 ರಿಕ್ಟರ್ ಪ್ರಮಾಣದ ಭೂಕಂಪಕ್ಕೂ ತಡೆ ನೀಡುವ ಶಕ್ತಿ.
ನಿರ್ಮಾಣಕ್ಕೆ ರೂ.2989 ಕೋಟಿ ವೆಚ್ಚ
5700 ಮೆಟ್ರಿಕ್ ಟನ್ ಕಬ್ಬಿಣ ಮತ್ತು ಕಂಚಿನ ಲೇಪನ, "ಲೋಹ ಸಂಗ್ರಹ ಆಂದೋಲನ" ಮೂಲಕ ಲೋಹ ಸಂಗ್ರಹ.
15,000 ಮಂದಿ ಆದಿವಾಸಿ ಜನರಿಗೆ ಉದ್ಯೋಗಾವಕಾಶ.
ಶಿಲ್ಪ ವಿನ್ಯಾಸ - ಖ್ಯಾತ ಶಿಲ್ಪಿ ರಾಮ್ ಸುತಾರ್, ಇವರು ಸಂಸತ್ತಿನಲ್ಲಿರುವ ಗಾಂಧೀಜಿ ಪ್ರತಿಮೆಯ ಶಿಲ್ಪಕಾರರೂ ಹೌದು.
ವಿಗ್ರಹದ ತಾತ್ಪರ್ಯ: ಈ ವಿಗ್ರಹ ಕೇವಲ ಕಂಚಿನ ಸ್ತಂಭವಲ್ಲ, ಅದು ಭಾರತದ ಏಕತೆ, ದೃಢತೆ ಮತ್ತು ಪ್ರಜಾಸತ್ತಾತ್ಮಕ ಸ್ಫೂರ್ತಿಯ ಸಂಕೇತವಾಗಿದೆ. ಕೆಲವರು ಕೋಟ್ಯಂತರ ರೂ. ವೆಚ್ಚದ ಬಗ್ಗೆ ಟೀಕೆ ಮಾಡಿದರೂ, ಈ ವಿಗ್ರಹ ಯುವ ಪೀಳಿಗೆಗೆ ರಾಷ್ಟ್ರಭಕ್ತಿ ಮತ್ತು ಕರ್ತವ್ಯಬೋಧನೆ ನೀಡುವ ಸ್ಮಾರಕವಾಗಿದೆ.
ಸರ್ದಾರ್ ಪಟೇಲ್ ಅವರ ಜೀವನ ನಮ್ಮೆಲ್ಲರಿಗೂ ಪ್ರೇರಣೆ. ಅವರು ತೋರಿದ ಪ್ರಾಮಾಣಿಕತೆ, ನಿಷ್ಠೆ ಮತ್ತು ದೇಶಪ್ರೇಮದ ಹಾದಿಯಲ್ಲಿ ಸಾಗಿದಾಗ ಮಾತ್ರ ‘ಏಕತಾ ಮೂರ್ತಿ’ ನಿರ್ಮಾಣದ ಉದ್ದೇಶ ಸಾರ್ಥಕವಾಗುತ್ತದೆ. ರಾಷ್ಟ್ರದ ಐಕ್ಯತೆ ಮತ್ತು ಪ್ರಗತಿಯು ಅವರ ಕನಸಿನ ಭಾರತದ ನಿಜವಾದ ಪ್ರತಿಬಿಂಬವಾಗಬೇಕು. ಅದೇ ರಾಷ್ಟ್ರೀಯ ಏಕತಾ ದಿವಸದ ನಿಜವಾದ ಅರ್ಥ.