ನವದೆಹಲಿ, ಜು02(Daijiworld News/SS): ಯಾವುದೇ ರಾಜಕೀಯ ನಾಯಕ ಕಾನೂನು ಕೈಗೆತ್ತಿಕೊಳ್ಳುವುದನ್ನು ಬೆಂಬಲಿಸಿದರೆ, ಅವರ ವಿರುದ್ದ ಬಿಜೆಪಿ ನಾಯಕತ್ವ ಕಠಿಣ ಕ್ರಮ ಜರುಗಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ.
ಮಧ್ಯ ಪ್ರದೇಶದ ಇಂದೋರ್ -3 ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುವ ಆಕಾಶ್ ವಿಜಯವರ್ಗೀಯ, ಮುನಿಸಿಪಲ್ ಅಧಿಕಾರಿ ಧೀರೇಂದ್ರ ಸಿಂಗ್ ಬೈಸ್ ಅವರ ಮೇಲೆ ಕ್ರಿಕೆಟ್ ಬ್ಯಾಟ್'ನಿಂದ ಹಲ್ಲೆ ನಡೆಸಿದ್ದ ಕೃತ್ಯ ಟಿವಿ ಕ್ಯಾಮರಗಳಲ್ಲಿ ಸೆರೆಯಾಗಿದ್ದವು. ಈ ದೃಶ್ಯಗಳು ದೇಶಾದ್ಯಂತ ವೈರಲ್ ಆಗಿ ಬಿಜೆಪಿ ಪಕ್ಷಕ್ಕೆ ತೀವ್ರ ಮುಜುಗರದ ಸನ್ನಿವೇಶ ಸೃಷ್ಟಿಸಿತ್ತು.
ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಪ್ರಧಾನಿ, ಘಟನೆಯ ಹಿಂದೆ ಯಾವ ನಾಯಕನ ಪುತ್ರ ಇದ್ದಾನೆ ಎಂಬುದನ್ನು ತಾವು ಕೇರ್ ಮಾಡುವುದಿಲ್ಲ. ಇಂತಹ ಘಟನೆಗಳು ನಡೆಯಬಾರದು ಹಾಗೂ ಇಂತಹ ಕೃತ್ಯಗಳನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಪ್ರಧಾನಿ ಎಚ್ಚರಿಕೆ ನೀಡಿದ್ದಾರೆ.
ಯಾವ ನಾಯಕನ ಮಗನೇ ಆಗಿರಲಿ, ಇಂತಹ ಕೃತ್ಯ ನಡೆಸುವವರನ್ನು ಸಹಿಸಲು ಆಗುವುದಿಲ್ಲ ಎಂದು ಪ್ರಧಾನಿ ಮೋದಿ ಬಿಜೆಪಿ ಸಂಸದರಿಗೆ ಸೂಚಿಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಬಿಜೆಪಿ ಸಂಸದೀಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದಾಗ ಪ್ರಧಾನಿ ಮೋದಿ ಪಕ್ಷದ ಸಂಸದರಿಗೆ ಈ ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.