ಬೆಂಗಳೂರು, ಅ. 31 (DaijiworldNews/AK):ನೀವು ಯಾರನ್ನಾದರೂ ಮುಖ್ಯಮಂತ್ರಿ ಮಾಡಿ; ಆದರೆ, ಮಹಿಳಾ ರಕ್ಷಣೆ ನಿಮ್ಮ ಆದ್ಯತೆಯಾಗಿರಲಿ ಎಂದು ಕೇಂದ್ರ ಸಚಿವರಾದ ಕು.ಶೋಭಾ ಕರಂದ್ಲಾಜೆ ಅವರು ಒತ್ತಾಯಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹ ಸಚಿವರು ಏನು ಕೆಲಸ ಮಾಡುತ್ತಿದ್ದಾರೆಂದು ಗೊತ್ತಿಲ್ಲ; ರಾಜ್ಯದ ಸಚಿವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಸಭೆ ನಡೆಸುತ್ತಾರೋ ಎಂಬುದೂ ಗೊತ್ತಿಲ್ಲ. ಗೃಹ ಸಚಿವರು ವಿವಿಧ ಜಿಲ್ಲೆಗಳಲ್ಲಿ ಎಸ್ಪಿ ಮತ್ತು ಪೊಲೀಸ್ ಅಧಿಕಾರಿಗಳ ಸಭೆ ನಡೆಸಬೇಕು; ಕಾನೂನು- ಸುವ್ಯವಸ್ಥೆಯ ಪರಿಶೀಲನೆ ಮಾಡಬೇಕು. ಆದರೆ, ಇವರು ಬೆಂಗಳೂರು ಬಿಟ್ಟು ಹೊರಟರೆ ತುಮಕೂರು ಎಂಬಂತಿದೆ ಎಂದು ಆಕ್ಷೇಪಿಸಿದರು.
ಮುಖ್ಯಮಂತ್ರಿಗಳು ಕಾರ್ಯಕ್ರಮದ ಶಿಲಾನ್ಯಾಸಕ್ಕೆ ಹೆಲಿಕಾಪ್ಟರ್ನಲ್ಲೇ ಹೋಗುತ್ತಿದ್ದು, ಅವರಿಗೆ ಭೂಮಿಯಲ್ಲಿ ಏನು ನಡೆಯುತ್ತದೆ ಎಂದು ಗೊತ್ತಿಲ್ಲ. ಡಿ.ಕೆ.ಶಿವಕುಮಾರ್ ಅವರ ರಾಜಕಾರಣ ಬೆಂಗಳೂರಿಗೆ ಮತ್ತು ವಿಧಾನಸೌಧದ ಸುತ್ತ ತಿರುಗುತ್ತಿದೆ. ಬೇಗ ಸಿಎಂ ಆಗಬೇಕೆಂಬುದು ಬಿಟ್ಟರೆ ತಲೆಯಲ್ಲಿ ಇನ್ನೇನೂ ಇಲ್ಲ ಎಂದು ಟೀಕಿಸಿದರು.
ಇದರ ಪರಿಣಾಮವಾಗಿ ಕರ್ನಾಟಕದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ, ಮಹಿಳೆಯರ ಕೊಲೆ, ಬಾಲಕಿಯರ ಮೇಲಿನ ಅತ್ಯಾಚಾರ ನಿರಂತರವಾಗಿ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ದುಡ್ಡು ಕೈ ಸೇರಿದರಷ್ಟೇ ವರ್ಗಾವಣೆ
ಪೊಲೀಸರ ಟೊಪ್ಪಿ ಬದಲಿಸುವ ಕುರಿತು ಸರಕಾರ ಯೋಚಿಸಿದೆ. ಅವರ ಕೈಗಳನ್ನು ಶಕ್ತಿಯುತವಾಗಿ ಮಾಡುವ ಕಡೆ ಗಮನಿಸಿಲ್ಲ ಎಂದು ಆಕ್ಷೇಪಿಸಿದರು. ದುಡ್ಡು ಕೊಡದೆ ಟ್ರಾನ್ಸ್ಫರ್ ಆಗುವುದಿಲ್ಲ; ವರ್ಗಾವಣೆಗೆ ಯಾವ ಪೊಲೀಸ್ ಠಾಣೆ ಎಂಬುದಕ್ಕೆ ನಿಗದಿತ ಮೊತ್ತ ಇದೆ. ದುಡ್ಡು ಕೈ ಸೇರಿದರಷ್ಟೇ ವರ್ಗಾವಣೆ ಆಗುತ್ತದೆ ಎಂದು ಕು.ಶೋಭಾ ಕರಂದ್ಲಾಜೆ ಅವರು ಆರೋಪಿಸಿದರು.