ಬೆಂಗಳೂರು, ನ. 01 (DaijiworldNews/AK):ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಿಂದ ಕನ್ನಡ ನೆಲದಲ್ಲಿ ಉದ್ಯೋಗ ನಷ್ಟವಾಗದಂತೆ ನಮ್ಮ ಭಾಷೆಯನ್ನು ಹೊಸ ಸವಾಲಿಗೆ ಬೇಕಾದ ಹಾಗೆ ಸಿದ್ಧಪಡಿಸಲು ಸರ್ಕಾರ ಬದ್ದವಾಗಿದೆ. ಕನ್ನಡವನ್ನು ಹೊಸ ತಂತ್ರಜ್ಞಾನದ ಭಾಷೆಯನ್ನಾಗಿಸಲು ವಿದ್ವಾಂಸರು, ತಾಂತ್ರಿಕ ತಜ್ಞರು ಮುಂದಾಗಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವದಲ್ಲಿ ನಾಡನ್ನು ಉದ್ದೇಶಿಸಿ ಮಾತನಾಡಿದರು. ಮಾಹಿತಿ ತಂತ್ರಜ್ಞಾನ ಯುಗ ಈಗ ಆರ್ಟಿಫಿಷಿಯಲ್ ತಂತ್ರಜ್ಞಾನದ ಯುಗವಾಗಿ ಮಾರ್ಪಾಡಾಗುತ್ತಿದೆ. ಇದರಿಂದ ಉದ್ಯೋಗ ನಷ್ಟವಾಗಬಹುದು ಎಂಬ ಆತಂಕವೂ ಎದುರಾಗಿದೆ. ಕನ್ನಡ ಭಾಷೆ, ಪರಂಪರೆ ಮತ್ತು ಸಂಸ್ಕೃತಿಯನ್ನು ಜಾಗತಿಕ ಮಟ್ಟಕ್ಕೆ ಎತ್ತರಿಸುವ ಕಾರ್ಯವನ್ನೂ ನಮ್ಮ ಸರ್ಕಾರ ಮಾಡುತ್ತಿದೆ. ಇದರ ಭಾಗವಾಗಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಿಂದ ಉದ್ಯೋಗ ನಷ್ಟವಾಗದಂತೆ ನಮ್ಮ ಭಾಷೆಯನ್ನು ಹೊಸ ಸವಾಲಿಗೆ ಬೇಕಾದ ಹಾಗೆ ಸಿದ್ಧಪಡಿಸಲು ಸರ್ಕಾರ ಬದ್ದವಾಗಿದೆ. ಕನ್ನಡವನ್ನು ಹೊಸ ತಂತ್ರಜ್ಞಾನದ ಭಾಷೆಯನ್ನಾಗಿಸಲು ವಿದ್ವಾಂಸರು, ತಾಂತ್ರಿಕ ತಜ್ಞರು ಮುಂದಾಗಿ ಎಂದು ಕರೆ ನೀಡಿದರು.
ಇದರ ಜೊತೆಗೆ 800 ಕನ್ನಡ ಶಾಲೆಗಳು ಮತ್ತು 100 ಉರ್ದು ಶಾಲೆಗಳನ್ನು ಕೆಪಿಎಸ್ ಶಾಲೆಗಳನ್ನಾಗಿ ಅಭಿವೃದ್ಧಿ ಮಾಡಲಾಗುತ್ತಿದೆ. ಮದರಸಾಗಳಲ್ಲಿ ಕನ್ನಡ ಕಲಿಸಲು ಆದ್ಯತೆ ನೀಡುತ್ತಿದ್ದೇವೆ. ಕನ್ನಡ ಭಾಷೆ, ಪರಂಪರೆಗಳನ್ನು ಜಾಗತಿಕ ಮಟ್ಟಕ್ಕೆ ಎತ್ತರಿಸಬೇಕಾದ ಅನಿವಾರ್ಯತೆಯಿರುವುದರಿಂದ ಇದಕ್ಕಾಗಿ ಹೊಸ ನೀತಿಯನ್ನು ತರುವ ಸಿದ್ಧತೆಯಲ್ಲಿದ್ದೇವೆ ಎಂದರು.
ರಾಜ್ಯದಲ್ಲಿ ಶತಮಾನ ಪೂರೈಸಿರುವ ಸುಮಾರು 3000 ಸರ್ಕಾರಿ ಶಾಲೆಗಳಿವೆ. ರಾಜ್ಯದಲ್ಲಿ ಶಾಲಾ ಶಿಕ್ಷಣ ಕ್ಷೇತ್ರವನ್ನು ಬಲಪಡಿಸುವ ಸಲುವಾಗಿ ರಾಜ್ಯಾದ್ಯಂತ 2,500 ಕೋಟಿ. ರೂ. ವೆಚ್ಚದಲ್ಲಿ 800 ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ (KPS) ಪರಿವರ್ತಿಸಿ ಪ್ರತಿ ಶಾಲೆಯನ್ನು 4 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಅಗತ್ಯ ಮೂಲಸೌಕರ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗುವುದು ಎಂದರು.
ಅಲ್ಪಸಂಖ್ಯಾತ ಸಮುದಾಯಗಳು ಮುಖ್ಯವಾಹಿನಿಗೆ ಬರುವ ಜೊತೆಗೆ ಸುಲಭವಾಗಿ ಸಮಾಜದಲ್ಲಿ ಬೆರೆಯುವಂತೆ ಪ್ರಾಥಮಿಕ ಕನ್ನಡವನ್ನು ಮದರಸಾ ಶಿಕ್ಷಣದ ಭಾಗವಾಗಿ ಕಲಿಸಲು ಪ್ರಸ್ತುತ ವರ್ಷದಲ್ಲಿ 80 ಮದರಸಾಗಳಲ್ಲಿ ಕನ್ನಡ ಕಲಿಸಲಾಗುತ್ತಿದೆ. ಇದನ್ನು ರಾಜ್ಯದಲ್ಲಿರುವ 1500 ಮದರಸಾಗಳಿಗೆ ವಿಸ್ತರಿಸಲಾಗುವುದು. ಇದಕ್ಕಾಗಿ ರೂ.483 ಕೋಟಿ ವೆಚ್ಚದಲ್ಲಿ 100 ಉರ್ದು ಶಾಲೆಗಳನ್ನು ಕೆ.ಪಿ.ಎಸ್. ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಅಗತ್ಯ ಇರುವ ಕಡೆಗಳಲ್ಲಿ ಹೊಸದಾಗಿ ವಸತಿ ಶಾಲೆಗಳು, ವಸತಿ ನಿಲಯಗಳನ್ನು ಸ್ಥಾಪಿಸುತ್ತಿದ್ದೇವೆ. ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿ ಪ್ರತ್ಯೇಕ ವಸತಿ ಶಾಲೆಗಳನ್ನು ಪ್ರಾರಂಭಿಸಲಾಗಿದೆ. ಕ್ಯಾನ್ಸರ್ನಿಂದ ಬಾಧಿತರಾದ ಮಕ್ಕಳಿಗೆ ವೈದ್ಯಕೀಯ ಬೆಂಬಲದೊಂದಿಗೆ ಶಿಕ್ಷಣವನ್ನು ಒದಗಿಸುವ ಕೆಲಸ ಮಾಡಲಾಗುತ್ತಿದೆ.
ಕಾಲಕಾಲಕ್ಕೆ ಶಿಕ್ಷಕರ ನೇಮಕಾತಿ ಮತ್ತು ತರಬೇತಿಗಳನ್ನು ನಡೆಸಲಾಗುತ್ತಿದೆ. 2024ರಲ್ಲಿ 14,499 ಪದವಿ ಪ್ರಾಥಮಿಕ ಶಿಕ್ಷಕರ ನೇಮಕಾತಿ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ 5,267 ಮತ್ತು ಇತರೆ ಪ್ರದೇಶಗಳಲ್ಲಿ 5,000 ಶಿಕ್ಷಕರ ನೇಮಕಾತಿ ಮಾಡಲಾಗುತ್ತಿದೆ. 800 ಹೊಸ ಪಿಯು ಉಪನ್ಯಾಸಕರ ನೇಮಕಾತಿ ಮಾಡಲಾಗಿದೆ. ಹೊಸದಾಗಿ 18000 ಕ್ಕೂ ಹೆಚ್ಚು ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುತ್ತಿದೆ. ಅನುದಾನಿತ ಶಾಲೆಗಳಿಗೆ 5,000 ಶಿಕ್ಷಕರ ಹುದ್ದೆಗಳನ್ನು ನೇಮಕ ಮಾಡಲು ಅನುಮತಿ ನೀಡಲಾಗಿದೆ.
ಇತ್ತೀಚೆಗೆ ತಾನೆ ಪ್ರೊ.ಸುಖ್ದೇವ್ ಥೋರಟ್ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿದ್ದ ರಾಜ್ಯ ಶಿಕ್ಷಣ ನೀತಿ ಆಯೋಗವು ತನ್ನ ವರದಿಯನ್ನು ನೀಡಿದೆ. ರಾಜ್ಯದ್ದೆ ಆದ ಶಿಕ್ಷಣ ನೀತಿಯು ರಚನೆಯಾಗಿರುವುದು ಇದೇ ಮೊದಲು. ಸದರಿ ವರದಿಯನ್ನು ಗಂಭೀರವಾಗಿ ಪರಿಶೀಲಿಸಿ ಅದರ ಅನುಷ್ಠಾನಕ್ಕೆ ಕ್ರಮಗಳನ್ನು ಕೈಗೊಳ್ಳುತ್ತೇವೆ.
ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದ ಯೋಜನೆಗಳ ಜೊತೆಗೆ ಮಕ್ಕಳ ಬದುಕು ರೂಪುಗೊಳ್ಳಲು ಪೋಷಕರ ಪಾತ್ರವೂ ಅಷ್ಟೇ ಮಹತ್ವದ್ದಾಗಿದೆ ಎಂದರು.