ನವದೆಹಲಿ, ಜು02(Daijiworld News/SS): ಕುಡಿಯುವ ನೀರು ಬಿಡಿ ಎಂದು ಮಂಡ್ಯ ಲೋಕಸಭೆ ಕ್ಷೇತ್ರದ ಸಂಸದೆ ಸಂಸತ್ತಿನಲ್ಲಿ ಕನ್ನಡದಲ್ಲಿಯೇ ಚೊಚ್ಚಲ ಭಾಷಣ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಸಂಸತ್ತಿನಲ್ಲಿ ಮಾತನಾಡಿದ ಸುಮಲತಾ, ಕರ್ನಾಟಕ ಮತ್ತು ನನ್ನ ಕ್ಷೇತ್ರವಾದ ಮಂಡ್ಯಕ್ಕೆ ನೀರಿನ ಸಮಸ್ಯೆ ಉಂಟಾಗಿದೆ. ರಾಜ್ಯದ ಜನರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ನೀರಿನ ಕೊರತೆಯಾಗಿರುವುದರಿಂದ ರಾಜ್ಯದ ರೈತರು ಸಂಕಷ್ಟದ ಸ್ಥಿತಿ ತಲುಪಿದ್ದಾರೆ. ನಾವೆಲ್ಲ ಅವರ ಬೆನ್ನಿಗೆ ನಿಲ್ಲಬೇಕಾಗಿದೆ. ಹೀಗಾಗಿ ಕೂಡಲೇ ರಾಜ್ಯಕ್ಕೆ ನೀರು ಬಿಡುವಂತೆ ಸಂಸತ್ತಿನಲ್ಲಿ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಅದರಲ್ಲೂ ಪ್ರಮುಖವಾಗಿ ಕಾವೇರಿ ಕೊಳ್ಳದ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಿದೆ. ಕಬ್ಬು - ಭತ್ತ ಬೆಳೆಗಾರರು ಸತತ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಕೃಷಿ ಸಾಲವನ್ನು ತೀರಿಸಲಾಗದೆ ರೈತರು ಪರಿತಪಿಸುತ್ತಿದ್ದಾರೆ. ಹೀಗಾಗಿ ನಾವೆಲ್ಲರೂ ರೈತರ ಬೆನ್ನಿಗೆ ನಿಲ್ಲಬೇಕಾದ ಅವಶ್ಯಕತೆ ಇದೆ ಎಂದು ಮನವಿ ಮಾಡಿದ್ದಾರೆ.
ಮಂಡ್ಯ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಸುಮಲತಾ ಅವರು, ಮೈತ್ರಿ ಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಪರಾಭವಗೊಳಿಸಿ ಲೋಕಸಭೆಗೆ ಆಯ್ಕೆಯಾಗಿದ್ದುರು. ಇಂದು ರಾಜ್ಯದಲ್ಲಿನ ನೀರಿನ ಸಮಸ್ಯೆ ಕುರಿತು ಧ್ವನಿ ಎತ್ತಿದ್ದಾರೆ.