ವಿಜಯಪುರ, ಜು 02 (Daijiworld News/SM): ರಾಜ್ಯ ಸರಕಾರವನ್ನು ಪತನಗೊಳಿಸಲು ಹತ್ತು ಹಲವು ರೀತ್ಯ ಕಸರತ್ತುಗಳು ನಡೆಯುತ್ತಿವೆ. ಆದರೆ ಸರಕಾರ ಸುಭದ್ರವಾಗಿದೆ. 'ಈಗ ಸಂಖ್ಯಾಬಲ ನಮ್ಮ ಕಡೆ ಇದೆ. ಹೀಗಾಗಿ ಅಧಿಕಾರ ನಡೆಸುತ್ತೇವೆ. ಮುಂದಿನ ನಾಲ್ಕು ವರ್ಷಗಳ ಕಾಲ ಸರ್ಕಾರ ಸುಭದ್ರವಾಗಿರುತ್ತದೆ' ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಹೇಳಿದರು.
ವಿಜಯಪುರದಲ್ಲಿ ಮಾತನಾಡಿದ ಎಂ.ಬಿ.ಪಾಟೀಲ್, 'ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಕನಿಷ್ಠ 15 ಶಾಸಕರು ರಾಜೀನಾಮೆ ನೀಡಬೇಕು. ಅಷ್ಟು ಶಾಸಕರನ್ನು ಕಳೆದುಕೊಳ್ಳಲು ನಾವು ತಯಾರಿಲ್ಲ. ಅಷ್ಟೊಂದು ಶಾಸಕರು ರಾಜೀನಾಮೆ ನೀಡುವುದಿಲ್ಲ' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು 'ಆನಂದ್ ಸಿಂಗ್, ರಮೇಶ್ ಜಾರಕಿಹೊಳಿ ರಾಜೀನಾಮೆ ಪತ್ರ ಕಳುಹಿಸಿದ ಮಾತ್ರಕ್ಕೆ ಅಂಗೀಕಾರವಾಗುವುದಿಲ್ಲ. ಅವರು ಖುದ್ದಾಗಿ ಬಂದು ಸ್ಪೀಕರ್ಗೆ ರಾಜೀನಾಮೆ ಪತ್ರ ನೀಡಬೇಕು. ಬಳಿಕ ಅವರು ಪರಿಶೀಲನೆ ನಡೆಸಿ ಅಂಗೀಕಾರ ಮಾಡಿದ ಬಳಿಕವಷ್ಟೇ ' ಎಂದು ಎಂ.ಬಿ.ಪಾಟೀಲ್ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಬಿಜೆಪಿ ನಾಯಕರ ಕೆ.ಎಸ್.ಈಶ್ವರಪ್ಪ ಅವರ 'ಇನ್ನೂ ನಾಲ್ಕು ಜನ ಶಾಸಕರು ರಾಜೀನಾಮೆ ನೀಡುವ ಬಗ್ಗೆ ಎಂ.ಬಿ.ಪಾಟೀಲರಿಗೆ ಮಾಹಿತಿ ಇದೆ' ಎಂಬ ಹೇಳಿಕೆಗೆ ತಿರುಗೇಟು ಕೊಟ್ಟ ಸಚಿವರು, 'ಈಶ್ವರಪ್ಪ ಅವರಷ್ಟು ಇಂಟೆಲಿಜೆನ್ಸಿ ನೆಟ್ವರ್ಕ್ ನಮ್ಮದಿಲ್ಲ. ಅವರು ದೊಡ್ಡವರು, ಮೇಧಾವಿಗಳು ಹೀಗಾಗಿ ಅವರನ್ನೇ ಕೇಳಿ' ಎಂದರು.