ನವದೆಹಲಿ, ಜು03(Daijiworld News/SS): ನೋಟು ರದ್ದತಿಯಿಂದ ದೇಶಿ ಆರ್ಥಿಕತೆ, ಉದ್ಯೋಗ ಮತ್ತು ಎಂಎಸ್ಎಂಇ ವಲಯದ ಮೇಲೆ ಆಗಿರುವ ಪರಿಣಾಮಗಳ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಅಧ್ಯಯನ ನಡೆಸಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ತಯಾರಿಕಾ ವಲಯ ಕೆಲ ಮಟ್ಟಿನ ಇಳಿಕ ಕಂಡಿದೆಯಾದರೂ ಅದಕ್ಕೆ ನೋಟು ರದ್ದತಿ ಕಾರಣವಲ್ಲ. 2018–19ರಲ್ಲಿ ಆರ್ಥಿಕ ಪ್ರಗತಿ ಕುಂಠಿತಗೊಂಡಿರುವುದಕ್ಕೆ ಕೃಷಿ, ವ್ಯಾಪಾರ, ಹೋಟೆಲ್, ಸಾರಿಗೆ, ಸಂಪರ್ಕ ಮತ್ತು ಸೇವಾ ವಲಯಗಳಲ್ಲಿನ ಪ್ರಗತಿ ಇಳಿಕೆಯಾಗಿರುವುದು ಕಾರಣ ಎಂದು ಹೇಳಿದ್ದಾರೆ.
ನರೇಂದ್ರ ಮೋದಿ 2.0 ಸರ್ಕಾರದ ಕಾರ್ಯಸೂಚಿಗಳಲ್ಲಿ ಆರ್ಥಿಕ ಪ್ರಗತಿ ಸಾಧಿಸುವುದಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ಜಿಡಿಪಿಗೆ ವೇಗ ನೀಡಲು ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. 2018–19ರಲ್ಲಿ ಜಿಡಿಪಿ ಶೇ 6.8ರಷ್ಟು ಪ್ರಗತಿ ಸಾಧಿಸಿದ್ದು, 5 ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ಕೃಷಿ, ವ್ಯಾಪಾರ, ಸಾರಿಗೆ, ಸಂವಹನ ಮತ್ತು ಸೇವಾ ವಲಯಗಳ ಮಂದಗತಿಯ ಪ್ರಗತಿಯಿಂದಾಗಿ ಜಿಡಿಪಿ ಕುಸಿತ ಕಂಡಿದೆ ಎಂದು ಹೇಳಿದ್ದಾರೆ.
2014–15 ರಿಂದ 2018–19ರ ಅವಧಿಯಲ್ಲಿ ಜಿಡಿಪಿ ಶೇ 7.5ರಷ್ಟು ಗರಿಷ್ಠ ಬೆಳವಣಿಗೆ ಕಂಡಿದೆ. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯನ್ನು ಎಲ್ಲ ರೈತರಿಗೂ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುವುದು. ಸದ್ಯ 2 ಎಕರೆಗಿಂತಲೂ ಕಡಿಮೆ ಭೂಮಿ ಹೊಂದಿರುವವರಿಗೆ ಮಾತ್ರವೇ ವರ್ಷಕ್ಕೆ ರೂ. 6 ಸಾವಿರ ನೀಡಲಾಗುತ್ತಿದೆ ಎಂದು ಹೇಳಿದರು.
ಭಾರತವೂ ಈಗಲೂ ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಆರ್ಥಿಕತೆಯಾಗಿದೆ. ಅಮೆರಿಕವು 2016ರಲ್ಲಿ ಶೇ 1.6, 2017ರಲ್ಲಿ ಶೇ 2.2, 2018ರಲ್ಲಿ ಶೇ 2.9 ಮತ್ತು 2019ರಲ್ಲಿ ಶೇ 2.3ರಷ್ಟು ಪ್ರಗತಿ ಸಾಧಿಸಿದೆ. ಚೀನಾದ ಪ್ರಗತಿಯೂ ಶೇ 6.7 ರಿಂದ ಶೇ 6.8ಕ್ಕೆ ಮತ್ತು ಶೇ 6.6 ರಿಂದ ಶೇ 6.3ಕ್ಕೆ ಇಳಿಕೆಯಾಗಿದೆ. ಆದರೆ, ಭಾರತವು ಶೇ 7ಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಪ್ರಗತಿ ಸಾಧಿಸುತ್ತಿದೆ ಎಂದು ಹೇಳಿದ್ದಾರೆ.