ಬೆಂಗಳೂರು, ಜು03(Daijiworld News/SS): ರಾಜ್ಯದಲ್ಲಿ ಇನ್ನು ಮುಂದೆ ಸರಕಾರಿ ನೌಕರಿ ಪಡೆಯಲು ಎಸ್.ಎಸ್.ಎಲ್.ಸಿ ಕಡ್ಡಾಯ. ಈ ಸಂಬಂಧ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಕಾಯಿದೆ-1978ರಲ್ಲಿ ತಿದ್ದುಪಡಿಯೊಂದಿಗೆ ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಿದೆ.
ಗ್ರೂಪ್ 'ಡಿ' ಸೇವೆ ಮತ್ತು ಮೇಲ್ಪಟ್ಟ ರಾಜ್ಯ ಸಿವಿಲ್ ಸೇವೆಗಳ ನೇಮಕಾತಿಗೆ ಎಸ್ಸೆಸ್ಸೆಲ್ಸಿಗಿಂತ ಕಡಿಮೆ ಶೈಕ್ಷಣಿಕ ಅರ್ಹತೆಯನ್ನು ಪರಿಗಣಿಸುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಆದರೆ, ದಲಾಯತ್, ಜವಾನ ಸೇರಿ ಯಾವುದೇ ಗ್ರೂಪ್ 'ಡಿ' ಹುದ್ದೆಗೆ ನೇಮಕ ಆಗಬೇಕಿದ್ದರೂ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆಯನ್ನು ರಾಜ್ಯ ಸರಕಾರ ಕಡ್ಡಾಯಗೊಳಿಸಿದೆ.
ಈ ಹಿಂದೆ ಸಚಿವಾಲಯ ಸೇರಿದಂತೆ ರಾಜ್ಯ ಸರಕಾರದ ಇಲಾಖೆಗಳು ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ದಲಾಯತ್ಗಳು, ವಾಹನ ಚಾಲಕರು, ಜವಾನ ಹುದ್ದೆ ಸೇರಿ ನಾನಾ ಗ್ರೂಪ್ 'ಡಿ' ಹುದ್ದೆಗಳ ನೇಮಕದಲ್ಲಿ 7ನೇ ತರಗತಿ ತೇರ್ಗಡೆಯನ್ನೂ ಪರಿಗಣಿಸಲಾಗುತ್ತಿತ್ತು. ಈ ಶೈಕ್ಷಣಿಕ ಅರ್ಹತೆ ದೃಢೀಕರಣದಲ್ಲಿ ತಪ್ಪುಗಳಾಗುತ್ತಿವೆ ಎಂಬ ಕಾರಣಕ್ಕೆ ಇಂಧನ ಇಲಾಖೆ ಲೈನ್ಮನ್ಗಳು, ಸಾರಿಗೆ ನಿಗಮಗಳ ಚಾಲಕರ ನೇಮಕದಲ್ಲಿ ಈಗಾಗಲೇ ಎಸ್.ಎಸ್.ಎಲ್.ಸಿ ತೇರ್ಗಡೆಯನ್ನು ಕನಿಷ್ಠ ಅರ್ಹತೆಯಾಗಿ ಪರಿಗಣಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಮಹತ್ವದ ತೀರ್ಮಾನದ ಜತೆಗೆ, ನೇಮಕಾತಿ ಕಾಯಂ ಅಥವಾ ಬಡ್ತಿಗೆ ಮಾನದಂಡವಾಗಿ ಪ್ರೊಬೆಷನರಿ ಅವಧಿಯನ್ನು ಪರಿಗಣಿಸುವ ನಿಯಮಾವಳಿಯಲ್ಲೂ ಬದಲಾವಣೆ ತರಲಾಗಿದೆ ಎನ್ನಲಾಗಿದೆ.