ಬೆಂಗಳೂರು, ಜು 03 (Daijiworld News/MSP): ದೇಶದಲ್ಲಿಯೇ ಮೊತ್ತ ಮೊದಲ ಬಾರಿಗೆ ಕರ್ನಾಟಕ ರಾಜ್ಯದ ಗೃಹ ಇಲಾಖೆ ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆದಿದ್ದು, ಜನರು ತಮ್ಮ ಸಮಸ್ಯೆಯನ್ನು ಮುಕ್ತವಾಗಿ ಸಾಮಾಜಿಕ ಜಾಲತಾಣದ ಮೂಲಕ ಗೃಹ ಇಲಾಖೆಗೆ ತಿಳಿಸಬಹುದು ಎಂದಿದೆ.
ರಾಜ್ಯ ಜನತೆ ತಮ್ಮ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ದಂಧೆ, ಅಪರಾಧ ಹಾಗೂ ತಮ್ಮ ವೈಯಕ್ತಿಕ ಸಮಸ್ಯೆಗಳ ಬಗ್ಗೆ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಲು ಹಿಂಜರಿಯುತ್ತಿರುವುದು ಇನ್ನೂ ಕೂಡಾ ನಿಂತಿಲ್ಲ. ಈ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಗ್ರಗಣ್ಯ ಸ್ಥಾನದಲ್ಲಿ ಹಾಗೂ ಜನ ಹೆಚ್ಚೆಚ್ಚು ಬಳಸುತ್ತಿರುವ ಫೇಸ್ಬುಕ್, ಟ್ವಿಟರ್, ಶೇರ್ಚಾಟ್ನಲ್ಲಿ ಗೃಹ ಇಲಾಖೆ ತನ್ನ ಅಕೌಂಟ್ ಖಾತೆ ತೆರೆದಿದ್ದು, ಜನರು ಇಲ್ಲಿ ಯಾವುದೇ ಹಿಂಜರಿಕೆ ಇಲ್ಲದೆ ದೂರು ನೀಡಲು ಅವಕಾಶ ಮಾಡಿಕೊಟ್ಟಿದೆ.
ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ಈ ರೀತಿಯ ಹೊಸ ಪ್ರಯತ್ನವನ್ನು ಆರಂಭಿಸಿದ್ದು, ಈ ಖಾತೆ ಮೂಲಕ ಜನರ ಸಮಸ್ಯೆ, ದೂರುಗಳ ಬಗ್ಗೆ ಗಮನಹರಿಸುವುದರೊಂದಿಗೆ ಗೃಹ ಇಲಾಖೆಯ ಅಧಿಕಾರಿಗಳು ಸಮಸ್ಯೆಗೆ ಪರಿಹಾರ ಸೂಚಿಸಲಿದ್ದಾರೆ .
ಇದರೊಂದಿಗೆ ರಾಜ್ಯದ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ನಡೆದ ಜನಪರ ಚಟುವಟಿಕಗಳು, ಅಪರಾಧ, ಸಂಚಾರ ದಟ್ಟಣೆ ತಡೆಗಟ್ಟಲು ಕೈಗೊಂಡ ಕ್ರಮಗಳನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಜನರಿಗೆ ಗೃಹ ಇಲಾಖೆ ಮಾಹಿತಿ ಒದಗಿಸಲಿದೆ.