ಪುಣೆ, ಜು 03 (Daijiworld News/MSP): ನಿರಂತರ ಸುರಿದ ಮಳೆಗೆ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಚಿಪ್ಲೂನ್ ತಾಲೂಕಿನ ತಿವಾರೆ ಜಲಾಶಯ ಒಡೆದು ಆರು ಮಂದಿ ಮೃತಪಟ್ಟು ಸುಮಾರು 30 ಜನ ನಾಪತ್ತೆಯಾಗಿದ್ದಾರೆ. ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಅಣೆಕಟ್ಟು ಒಡೆದಿದ್ದು ಇದರ ಪರಿಣಾಮ ತಿವಾರೆ ಅಣೆಕಟ್ಟಿನ ಕೆಳಭಾಗದಲ್ಲಿದ್ದ ಏಳು ಹಳ್ಳಿಗಳು ಜಲಾವೃತಗೊಂಡಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಜಲಾಶಯದ ಸನಿಹದಲ್ಲೇ ಇದ್ದ ಸುಮಾರು 12 ಮನೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಪೊಲೀಸ್ ಹಾಗೂ ಸ್ವಯಂ ಸೇವಕರು ಸ್ಥಳದಲ್ಲಿದ್ದು, ನಾಪತ್ತೆಯಾದವರ ಶೋಧ ಕಾರ್ಯ ಹಾಗೂ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಮುಂಬೈಯಿಂದ 300 ಕಿಲೋ ಮೀಟರ್ ದೂರದಲ್ಲಿರುವ ರತ್ನಗಿರಿ ಜಿಲ್ಲೆಯಲ್ಲಿ ಚಿಪ್ಲನ್ ಹತ್ತಿರ ತಿವಾರೆ ಎಂಬಲ್ಲಿ ಸಣ್ಣ ಅಣೆಕಟ್ಟು ಧಾರಾಕಾರ ಮಳೆಗೆ ಒಡೆದು ನೀರು ಹೊರಬಂದು ಜಲಾವೃತವಾಗಿ ಕಣ್ಮರೆಯಾದವರ ಸಂಖ್ಯೆ ಇನ್ನೂ ಹೆಚ್ಚಾಗಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ.
ಕಳೆದ ಕೆಲವು ದಿನಗಳಿಂದಲೂ ಮಹಾರಾಷ್ಟ್ರದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಪ್ರವಾಹ ನೀರು ಮನೆಗೆ ನುಗ್ಗಿ ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಮಂಗಳವಾರ ಸಾರ್ವತ್ರಿಕ ರಜೆ ದಿನವನ್ನಾಗಿ ಘೋಷಿಸಲಾಗಿತ್ತು.