ನವದೆಹಲಿ, ಜು03(Daijiworld News/SS): ಹೊಸ ನಾಯಕನನ್ನು ತಡ ಮಾಡದೇ ಕೂಡಲೇ ಪಕ್ಷ ಆಯ್ಕೆ ಮಾಡಬೇಕು. ಆಯ್ಕೆ ಪ್ರಕ್ರಿಯೆಯಲ್ಲಿ ನಾನು ತಲೆ ಹಾಕುವುದಿಲ್ಲ ಎಂದು ರಾಹುಲ್ ಗಾಂಧಿ ಅವರು ಹೇಳಿದ್ದಾರೆ.
ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಾನು ಈಗಾಗಲೇ ರಾಜೀನಾಮೆ ನೀಡಿದ್ದೇನೆ. ನಾನು ಕಾಂಗ್ರೆಸ್ನ ಅಧ್ಯಕ್ಷ ಹುದ್ದೆ ತೊರೆದಿದ್ದೇನೆ. ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಪಕ್ಷದ ಕಾರ್ಯಕಾರಿ ಸಮಿತಿಯು ಕೂಡಲೇ ಸಭೆ ಸೇರಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಹೊಸ ನಾಯಕನನ್ನು ತಡ ಮಾಡದೇ ನೇಮಕ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.
ಲೋಕಸಭೆ ಚುನಾವಣೆಯ ಸೋಲಿನ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ಕಾಂಗ್ರೆಸ್ನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ, ಅದನ್ನು ಪಕ್ಷದ ಕಾರ್ಯಕಾರಿ ಸಮಿತಿ ಇನ್ನೂ ಅಂಗೀಕರಿಸಿಲ್ಲ. ಈ ನಡುವೆ ಕಾಂಗ್ರೆಸ್ ಮುಖ್ಯಮಂತ್ರಿಗಳೆಲ್ಲರೂ ರಾಹುಲ್ ಗಾಂಧಿ ಮೇಲೆ ಒತ್ತಡ ಹೇರುತ್ತಿದ್ದು, ಪಕ್ಷದ ಅಧ್ಯಕ್ಷ ಸ್ಥಾನವನ್ನು ತೊರೆಯದಂತೆ ಮನವಿ ಮಾಡಿದ್ದಾರೆ.
ಲೋಕಸಭೆ ಚುನಾವಣೆ ಮುಖಭಂಗದ ಬಳಿಕ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ತ್ಯಜಿಸುವ ಘೋಷಣೆ ಮಾಡಿರುವ ರಾಹುಲ್ ಗಾಂಧಿ ಅವರ ಮನವೊಲಿಸಲು ಪಕ್ಷದಲ್ಲಿ ಅಂತಿಮ ಕಸರತ್ತು ನಡೆಯುತ್ತಿದ್ದರೂ, ಸಫಲವಾಗುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ.