ನವದೆಹಲಿ, ಜು 03:(Daijiworld News/SM): ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಸೋಲುಂಡು ತಿಂಗಳು ಕಳೆದ ಬಳಿಕ ಪರಜಯದ ನೈತಿಕ ಹೊಣೆ ಹೊತ್ತಿರುವ ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಎಐಸಿಸಿ ಅಧ್ಯಕ್ಷ ಸ್ಥಾನದ ಖುರ್ಚಿಯನ್ನು ಮುಂದೆ ಯಾರು ಅಲಂಕರಿಸಲಿದ್ದಾರೆ ಎಂಬ ಬಗ್ಗೆ ಎಲ್ಲೆಡೆ ಚರ್ಚೆಗಳು ನಡೆಯುತ್ತಿವೆ. ಬಹುತೇಕ ಅಭಿಪ್ರಾಯಗಳ ಪ್ರಕಾರ ಗಾಂಧಿ ಕುಟುಂಬದೊಂದಿಗೆ ನಿಕಟ ಸಂಪರ್ಕ ಹೊಂದಿರುವವರಿಗೆ ಈ ಸ್ಥಾನ ಲಭಿಸಲಿದೆ ಎಂಬ ಬಗ್ಗೆ ಚರ್ಚೆಯಾಗುತ್ತಿದೆ. ಅಲ್ಲದೆ ಇದು ಬಹುತೇಕ ಖಚಿತ ಎಂದು ಕೂಡ ಹೇಳಲಾಗುತ್ತಿದೆ.
ಸದ್ಯ ಕರ್ನಾಟಕದ ಹಿರಿಯ ಮುಖಂಡರೊಬ್ಬರಿಗೆ ಈ ಸ್ಥಾನ ದೊರೆಯುತ್ತದೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಇನ್ನೊಂದೆಡೆ ಮಹಾರಾಷ್ಟ್ರದ ಸುಶೀಲ್ ಕುಮಾರ್ ಶಿಂಧೆಯವರ ಹೆಸರು ಕೂಡ ಕೇಳಿ ಬಂದಿದೆ.
ಇನ್ನು ಈ ಬಾರಿ ಅಧ್ಯಕ್ಷರ ಆಯ್ಕೆಗೆ ಯಾವುದೇ ರೀತಿಯ ಚುನಾವಣೆಗಳು ನಡೆಯುವುದಿಲ್ಲ. ಬದಲಿಗೆ ಸಿಡಬ್ಲ್ಯುಸಿ ಸಭೆಯಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಸೇರಿ ಒಮ್ಮತ್ತದಿಂದ ನಿರ್ಧಾರ ಕೈಗೊಳ್ಳಲಿದ್ದು, ಅವರೇ ಪಕ್ಷದ ಅಧ್ಯಕ್ಷರಾಗಲಿದ್ದಾರೆ ಎಂದು ತಿಳಿದು ಬಂದಿದೆ. ಗಾಂಧಿ ಕುಟುಂಬವನ್ನು ಹೊರತುಪಡಿಸಿ ಮೂರನೇ ಬಾರಿಗೆ ಹೊರಗಿನವರಿಗೆ ಅಧ್ಯಕ್ಷ ಸ್ಥಾನ ನೀಡಲಾಗುತ್ತಿದೆ.
ಲೋಕಸಭೆಯಲ್ಲಿ ಉತ್ತಮವಾಗಿ ಮಾತನಾಡಿರುವ ಮಲ್ಲಿಕಾರ್ಜುನ್ ಖರ್ಗೆ, ಕಳೆದ ಅನೇಕ ವರ್ಷಗಳಿಂದಲೂ ಗಾಂಧಿ ಕುಟುಂಬದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಇವರಿಗೆ ಅವಕಾಶ ಒಲಿದು ಬರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಇಲ್ಲಿಯ ತನಕ ಪಕ್ಷದಲ್ಲಿದ್ದುಕೊಂಡು ಪ್ರಾಮಾಣಿಕ ಹಾಗೂ ನಿಷ್ಠೆಯಿಂದ ಸೇವೆ ಸಲ್ಲಿಸಿರುವ ಕೀರ್ತಿಯನ್ನು ಖರ್ಗೆ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಧ್ಯಕ್ಷ ಸ್ಥಾನ ನೀಡಲು ಪಕ್ಷ ಮುಂದಾಗಿದೆ ಎಂದು ತಿಳಿದು ಬಂದಿದೆ.
ಈಗಾಗಲೇ ವಿರೋಧ ಪಕ್ಷದ ನಾಯಕನಾಗಿ ತಮ್ಮ ಜವಾಬ್ದಾರಿಯನ್ನ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಅಲ್ಲದೆ ಇದರೊಬ್ಬರು ದಲಿತ ಮುಖಂಡರಾಗಿರುವುದು ಕಾಂಗ್ರೆಸ್ ಗೆ ವರದಾನವಾಗಲಿದೆ. ಆದರೆ, ಪಕ್ಷ ಅಂತಿಮವಾಗಿ ಯಾರಿಗೆ ಮಣೆ ಹಾಕುತ್ತದೆ ಎಂಬುವುದು ಕುತೂಹಲದ ವಿಚಾರವಾಗಿದೆ.