ಬೆಂಗಳೂರು, ನ. 20 (DaijiworldNews/AA): ಬೆಂಗಳೂರಿನಲ್ಲಿ ಬೀದಿ ನಾಯಿ ದಾಳಿಯಿಂದ ಗಾಯಗೊಂಡ ಅಥವಾ ಸಾವನ್ನಪ್ಪಿದವರಿಗೆ ಕರ್ನಾಟಕ ಸರ್ಕಾರ ಪರಿಷ್ಕೃತ ಪರಿಹಾರ ಮಾರ್ಗಸೂಚಿ ಪ್ರಕಟಿಸಿದೆ. ಸಣ್ಣ ಗಾಯಗಳಿಗೆ 5,000 ರೂ., ಸಾವು ಸಂಭವಿಸಿದರೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಕರ್ನಾಟಕ ಸರ್ಕಾರ ನವೀಕರಿಸಿದ ಆದೇಶವನ್ನು ಬಿಡುಗಡೆಗೊಳಿಸಿದೆ.

ಬೆಂಗಳೂರು ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ದಾಳಿಯಿಂದ ಗಾಯಗೊಂಡ ಅಥವಾ ಸಾವನ್ನಪ್ಪಿದ ಜನರಿಗೆ ಪರಿಹಾರ ಮಾರ್ಗಸೂಚಿಗಳನ್ನು ಪರಿಷ್ಕರಿಸಿ ಕರ್ನಾಟಕ ಸರ್ಕಾರ ನವೀಕರಿಸಿದ ಆದೇಶವನ್ನು ಬಿಡುಗಡೆ ಮಾಡಿದ್ದು, ನಾಯಿ ಕಚ್ಚಿದ ಗಾಯ, ಮೂಗೇಟುಗಳು ಮತ್ತು ರಕ್ತಸ್ರಾವದ ಸಮಸ್ಯೆ, ಸೀಳುವಿಕೆ, ಇಂತಹ ಗಾಯಗಳು ಕಂಡು ಬಂದರೆ 5,000 ರೂ. ವರೆಗೆ ಪರಿಹಾರವನ್ನು ನೀಡಲಾಗುವುದು. ಇನ್ನು ಬೀದಿ ನಾಯಿ ದಾಳಿಯಿಂದ ಅಥವಾ ರೇಬೀಸ್ನಿಂದ ವ್ಯಕ್ತಿ ಸಾವನ್ನಪ್ಪಿದರೆ, ಅವರ ಕುಟುಂಬಕ್ಕೆ 5 ಲಕ್ಷ ರೂ.ಗಳ ಪರಿಹಾರ ನೀಡಲಾಗುವುದು.
ನಾಯಿಗಳ ದಾಳಿಯಿಂದ ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆಯನ್ನು ನೀಡಲು ಹಾಗೂ ಸಾವನ್ನಪ್ಪಿದವರ ಮನೆಯ ಆರ್ಥಿಕ ಸಹಾಯಕ್ಕಾಗಿ ಈ ಪರಿಷ್ಕರಣೆ ಮಾಡಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿದೆ. 2023ರಲ್ಲಿ ನಾಯಿಗಳ ದಾಳಿಯಿಂದ ಗಾಯಗೊಂಡ ಅಥವಾ ಸಾವನ್ನಪ್ಪಿದವರಿಗೆ ವಿಶೇಷ ಯೋಜನೆಯನ್ನು ಮಾಡಲಾಗಿತ್ತು. ಇದೀಗ ಆ ಯೋಜನೆಯನ್ನೇ ಮುಂದುವರಿಸಲಾಗುತ್ತಿದ್ದು, ಅದರಲ್ಲಿ ಕೆಲವೊಂದನ್ನು ಬದಲಾವಣೆ ಮಾಡಲಾಗಿದೆ.
ಈ 5,000 ರೂ.ಗಳಲ್ಲಿ 3,500 ರೂ.ಗಳನ್ನು ನಗರಾಭಿವೃದ್ಧಿ ಇಲಾಖೆ ನೀಡುತ್ತದೆ. ಉಳಿದ 1,500 ರೂ. ಅನ್ನು ಆರೋಗ್ಯ ಇಲಾಖೆಯ ಅಡಿಯಲ್ಲಿ ಬರುವ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ಗೆ ವರ್ಗಾಯಿಸಲಾಗುತ್ತದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ. ಈ ಮೂಲಕ ನಾಯಿಗಳ ದಾಳಿಯಿಂದ ಆಗಿರುವ ಗಾಯಗಳಿಗೆ ಸರಿಯಾದ ಚಿಕಿತ್ಸೆ ನೀಡಿ, ಗುಣಮುಖ ಮಾಡುವುದು ಸರ್ಕಾರ ಉದ್ದೇಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.