ಬೆಂಗಳೂರು, ಜು 04 (Daijiworld News/MSP): ಮೈತ್ರಿ ಸರ್ಕಾರದಲ್ಲಿ ಲಿಂಬೆ ಹಣ್ಣು ಕೂಡಾ ಪ್ರಚಾರಕ್ಕೆ ಬಂದಿರುವುದು ಹಳೇ ಸುದ್ದಿ. ಕೈಯಲ್ಲಿ 'ಲಿಂಬೆಹಣ್ಣು' ಹಿಡಿದು ಆಡಳಿತ ನಡೆಸುವ ಪರಿಸ್ಥಿತಿ ಕರ್ನಾಟಕ ಇದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಈ ಹಿಂದೆ ಲೇವಡಿ ಮಾಡಿದ್ದರು. ಇನ್ನು ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಅವರಿಗೆ ಲಿಂಬೆ ಹಣ್ಣು ಎಂದರೆ ಬಿಟ್ಟು ಬಿಡದ ನಂಟು.
ಇದೀಗ ಈ ನಿಂಬೆಹಣ್ಣಿನ ಕಾಟ ವಿಧಾನಸೌಧದಲ್ಲೂ ಬಿಟ್ಟಿಲ್ಲ. ಭದ್ರತಾ ಸಿಬ್ಬಂದಿಗಳು ಈ ಲಿಂಬೆ ಹಣ್ಣಿನ ಕಾಟದಿಂದ ರೋಸಿ ಹೋಗಿದ್ದು, ಹೀಗಾಗಿ ಲಿಂಬೆಹಣ್ಣಿಗೆ ವಿಧಾನಸೌಧಕ್ಕೆ ನೋ ಎಂಟ್ರಿ ಹೇರಲಾಗಿದೆ.
ಹೌದು, ಈಗ ಯಾರಲ್ಲಾದರೂ ಲಿಂಬೆಹಣ್ಣು ಕಂಡರೆ ತಪಾಸಣೆ ವೇಳೆ ಭದ್ರತಾ ಸಿಬ್ಬಂದಿಗಳನ್ನು ಅದನ್ನು ವಶಪಡಿಸಿ ಒಳಗೆ ಕಳುಹಿಸುತ್ತಾರೆ. ಭದ್ರತಾ ಸಿಬ್ಬಂದಿಯೊಬ್ಬರು ನೀಡಿದ ಮಾಹಿತಿಯಂತೆ ಅಲ್ಲಿ ದಿನಂಪ್ರತಿ ಸುಮಾರು 20 - 25 ಲಿಂಬೆಹಣ್ಣು ಸಿಗುವುದು ಗ್ಯಾರಂಟಿಯಂತೆ. ಇದು ಕೆಲವು ದಿನ 50 ಲಿಂಬೆಹಣ್ಣು ಮೀರಿದ್ದೂ ಇದೆಯಂತೆ. ಹೀಗಾಗಿ ಸಾರ್ವಜನಿಕರು ವಿಧಾನಸೌಧದೊಳಗೆ ಲಿಂಬೆಹಣ್ಣು ಕೊಂಡೊಯ್ಯದಂತೆ ಹದ್ದಿನ ಕಣ್ಣಿರಿಸಿದ್ದಾರೆ ಅಲ್ಲಿನ ಸೆಕ್ಯೂರಿಟಿ ಸಿಬ್ಬಂದಿ.
ಸದ್ಯ ಶಕ್ತಿ ಕೇಂದ್ರದ ಒಳಗೆ ಸಾರ್ವಜನಿಕರು ಔಷಧಗಳು, ಮಾತ್ರೆ, ಬ್ಲೇಡ್, ಚಾಕುಗಳನ್ನು ಮುಂತಾದ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ ಎಂಬ ನಿಯಮವಿದೆ. ಇದರ ಜತೆಗೆ ಲಿಂಬೆಹಣ್ಣು ಕೂಡಾ ಸೇರ್ಪಡೆಯಾಗಿದೆ.
ಶಕ್ತಿಕೇಂದ್ರದಲ್ಲಿ ಇತ್ತೀಚೆಗೆ ವರ್ಗಾವಣೆ ಕೆಲಸಗಳಿಗೆ ಚುರುಕುಮುಟ್ಟಿದೆ. ವರ್ಗಾವಣೆಗೆ ಶಿಫಾರಸು ಮಾಡಲು ವಿಧಾನಸೌಧಕ್ಕೆ ಬರುವ ಸರ್ಕಾರಿ ನೌಕರರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಹೀಗಾಗಿ ಲಿಂಬೆಹಣ್ಣು ತಂದರೆ ಅಂದುಕೊಂಡ ಕೆಲಸವಾಗಬಹುದೆಂದು ಮಂತ್ರಿಸಿದ ಲಿಂಬೆಹಣ್ಣುಗಳನ್ನು ಕೆಲವರು ತಂದಿರುತ್ತಾರೆಂದು ಸಿಬ್ಬಂದಿ ವಿವರಿಸುತ್ತಾರೆ.