ನವದೆಹಲಿ, ನ. 22 (DaijiworldNews/AA): ಚೀನಾ ಮತ್ತು ಟರ್ಕಿಯಲ್ಲಿ ತಯಾರಾದ ಶಸ್ತ್ರಾಸ್ತ್ರಗಳನ್ನು ಭಾರತಕ್ಕೆ ಪೂರೈಸುತ್ತಿದ್ದ ಪ್ರಮುಖ ಅಂತರರಾಷ್ಟ್ರೀಯ ಅಕ್ರಮ ಶಸ್ತ್ರಾಸ್ತ್ರ ಕಳ್ಳಸಾಗಣೆ ಜಾಲವನ್ನು ದೆಹಲಿಯ ಪೊಲೀಸರು ಭೇದಿಸಿ, ನಾಲ್ವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.

ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಗೆ ಸಂಬಂಧಿಸಿದ ಸಿಂಡಿಕೇಟ್, ಚೀನಾ ಮತ್ತು ಟರ್ಕಿಯಲ್ಲಿ ತಯಾರಾದ ಉನ್ನತ ದರ್ಜೆಯ ಪಿಸ್ತೂಲ್ಗಳನ್ನು ಪಾಕಿಸ್ತಾನದ ಮೂಲಕ ಭಾರತಕ್ಕೆ ಪೂರೈಸುತ್ತಿತ್ತು. ಪೊಲೀಸರು ಈ ಅಕ್ರಮ ಶಸ್ತ್ರಾಸ್ತ್ರ ಗ್ಯಾಂಗ್ನ ನಾಲ್ವರು ಪ್ರಮುಖ ಸದಸ್ಯರನ್ನು ಬಂಧಿಸಿ 10 ದುಬಾರಿ ವಿದೇಶಿ ಪಿಸ್ತೂಲ್ಗಳು ಮತ್ತು 92 ಲೈವ್ ಕಾರ್ಟ್ರಿಡ್ಜ್ಗಳನ್ನು ವಶಪಡಿಸಿಕೊಂಡಿದ್ದಾರೆ. ಅಂತೆಯೇ ಈ ಶಸ್ತ್ರಾಸ್ತ್ರಗಳನ್ನು ದೆಹಲಿ ಮತ್ತು ಸುತ್ತಮುತ್ತಲಿನ ರಾಜ್ಯಗಳ ಅಪರಾಧಿಗಳಿಗೆ ಪೂರೈಸಲಾಗುತ್ತಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಂಧಿತ ಆರೋಪಿಗಳಲ್ಲಿ ಇಬ್ಬರು ಪಂಜಾಬ್ ನಿವಾಸಿಗಳಾಗಿದ್ದು, ಪಂಜಾಬ್ನಲ್ಲಿ ಕಳ್ಳಸಾಗಣೆ ಜಾಲಕ್ಕೆ ಲಾಜಿಸ್ಟಿಕ್ ಬೆಂಬಲವನ್ನು ನಿರ್ವಹಿಸುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಗ್ಯಾಂಗ್ ಇಲ್ಲಿಯವರೆಗೆ ಭಾರತಕ್ಕೆ ಎಷ್ಟು ಶಸ್ತ್ರಾಸ್ತ್ರಗಳನ್ನು ಪೂರೈಸಿದೆ ಮತ್ತು ಯಾವ ಕ್ರಿಮಿನಲ್ ಗ್ಯಾಂಗ್ಗಳು ಅಥವಾ ವ್ಯಕ್ತಿಗಳು ಅವುಗಳನ್ನು ಸ್ವೀಕರಿಸಿದ್ದಾರೆ ಎಂಬುದನ್ನು ಅಪರಾಧ ವಿಭಾಗವು ತನಿಖೆ ನಡೆಸುತ್ತಿದೆ. ಜೊತೆಗೆ ಭದ್ರತಾ ಸಂಸ್ಥೆಗಳು ಮೊಬೈಲ್ ಫೋನ್ಗಳು, ಬ್ಯಾಂಕ್ ವಿವರಗಳು ಮತ್ತು ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಗ್ಯಾಂಗ್ನ ಇತರ ಸದಸ್ಯರು ಮತ್ತು ಅವರ ಸಂಪರ್ಕಗಳನ್ನು ಸಹ ತನಿಖೆ ನಡೆಸುತ್ತಿವೆ.