ನವದೆಹಲಿ, ನ. 22 (DaijiworldNews/AA): ದೆಹಲಿಯಲ್ಲಿ ದಿನೇ ದಿನೇ ವಾಯು ಗುಣಮಟ್ಟ ಮತ್ತಷ್ಟು ಕಳಪೆಯಾಗಿದ್ದು, ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ.

ನಿನ್ನೆಯಷ್ಟೇ 373 ರಷ್ಟಿದ್ದ ವಾಯುಗುಣಮಟ್ಟ ಇಂದು 360ಕ್ಕೆ ತಲುಪಿದೆ. ಹೀಗಾಗಿ ಸ್ವಲ್ಪ ಸಮಯ ರಾಜಧಾನಿಯನ್ನ ತೊರೆಯುವುದು ಅಥವಾ ಮನೆಯಲ್ಲಿಯೇ ಇರುವುದು ಉತ್ತಮ ಎಂದು ತಜ್ಞರು ತಿಳಿಸಿದ್ದಾರೆ. ಅದಕ್ಕೆ ತಕ್ಕಂತೆ ವಾಯು ಗುಣಮಟ್ಟ ನಿರ್ವಹಣಾ ಆಯೋಗವು ದೆಹಲಿ-ಎನ್ಸಿಆರ್ನಾದ್ಯಂತ 3ನೇ ಹಂತದ ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆಯ ಕ್ರಮಗಳನ್ನು ಜಾರಿಗೊಳಿಸಿದೆ.
GRAP-3 ನಿಯಮದ ಅನ್ವಯ ಎಲ್ಲಾ ಸರ್ಕಾರಿ, ಖಾಸಗಿ ಹಾಗೂ ಪುರಸಭೆಯ ಕಚೇರಿಗಳಲ್ಲಿ 50% ಸಿಬ್ಬಂದಿ ಮಾತ್ರ ಕಾರ್ಯ ನಿರ್ವಹಿಸುವಂತೆ ಶಿಫಾರಸ್ಸು ಮಾಡಲಾಗಿದೆ. ಆದರೆ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಉದ್ಯೋಗಿಗಳು ಸಂಪೂರ್ಣ ಮನೆಯಿಂದಲೇ ಕೆಲಸ ಮಾಡುವಂತೆ ಕ್ರಮ ವಹಿಸಬೇಕು. ಒಂದು ವೇಳೆ ವಾಯುಗುಣಮಟ್ಟ ಇನ್ನೂ ಕಳಪೆ ಮಟ್ಟಕ್ಕೆ ಕುಸಿದರೆ ಗ್ರಾಪ್-4 ನಿಯಮಗಳನ್ನ ಜಾರಿಗೊಳಿಸುವಂತೆ ವಾಯು ಗುಣಮಟ್ಟ ನಿರ್ವಹಣಾ ಆಯೋಗವು ಸರ್ಕಾರಕ್ಕೆ ಸಲಹೆ ನೀಡಿದೆ.