ಬಾಗಲಕೋಟೆ, ನ. 22 (DaijiworldNews/AK):ರಾಜ್ಯ ಸರಕಾರದ ಆಡಳಿತದ ಎರಡೂವರೆ ವರ್ಷ ಮುಗಿದಿದೆ. ಇಲ್ಲಿನವರೆಗೆ ಆಗಿದ್ದೇನು? ಮುಂದೆ ಆಗಬೇಕಾದುದೇನು ಎಂಬ ರೋಡ್ಮ್ಯಾಪ್ ಈ ಸರಕಾರಕ್ಕೆ ಇಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದ್ದಾರೆ.

ಇಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಒಬ್ಬರದು ಎರಡೂವರೆ ವರ್ಷ ಮುಖ್ಯಮಂತ್ರಿ ಸ್ಥಾನ ಮುಗಿದಿದೆ, ಈಗ ಅಧಿಕಾರ ಹಸ್ತಾಂತರ ಮಾಡಿ ನಮಗೆ ಕೊಡಿ ಎಂಬುದೇ ಅವರ ಪ್ರಯತ್ನ. ಆ ರೀತಿ ಕೊಡುವ ಸಂದರ್ಭದಲ್ಲಿ ಒಂದು ಡಜನ್ ಲೀಡರ್ಗಳು ಈಗ ಕ್ಯೂನಲ್ಲಿ ನಿಂತಿದ್ದಾರೆ ಎಂದು ಕಾಣಿಸುವುದಾಗಿ ತಿಳಿಸಿದರು.
ರಾಜ್ಯದ ಕಾಂಗ್ರೆಸ್ ಸರಕಾರ ಅಭಿವೃದ್ಧಿಯಲ್ಲಿ ಬಹಳ ಹಿಂದೆ ಬಿದ್ದಿದೆ; ಅಂದರೆ ಅದು ಅಭಿವೃದ್ಧಿ ಶೂನ್ಯವಾಗಿದೆ ಎಂದು ಆರೋಪಿಸಿದರು. ಕೇವಲ ಕೆಲವು ಗ್ಯಾರಂಟಿ ಕೊಟ್ಟಿದ್ದೇವೆ; ಇದರಲ್ಲೇ 5 ವರ್ಷ ಕಾಲಹರಣ ಮಾಡಬಹುದೆಂಬ ಭಾವನೆಯಲ್ಲಿ ಈ ಸರಕಾರ ಇದ್ದ ಹಾಗಿದೆ ಎಂದು ಆಕ್ಷೇಪಿಸಿದರು. ಅವರು ಮಾಡುವ ದುಂಡಾವರ್ತಿ, ಭ್ರಷ್ಟಾಚಾರ, ಕಾನೂನಾತ್ಮಕವಾಗಿ ಅನೇಕ ವಿಚಾರಗಳನ್ನು ಅವರು ತಿರುಚಿ ಕೆಲಸ ಮಾಡುತ್ತಿರುವುದನ್ನು ನೋಡಿದ್ದೇವೆ. ಅವರ ಸರಕಾರದಲ್ಲಿ ಭಾಗಿಯಾದವರೇ ಈ ರಾಜ್ಯ ಭ್ರಷ್ಟಾಚಾರದಲ್ಲಿ ನಂಬರ್ 1 ಆಗಿದೆ ಎಂದು ಹೇಳುತ್ತಾರೆ ಎಂದು ವಿವರಿಸಿದರು.
ಸಚಿವಸಂಪುಟ ಪುನಾರಚನೆ ಹೆಸರಿನಲ್ಲಿ ಕಾಲಹರಣ
ಇನ್ನೊಂದೆಡೆ ಸಚಿವಸಂಪುಟ ಪುನಾರಚನೆ ಕುರಿತ ಮಾತು ಒಂದು ವರ್ಷದಿಂದ ಕೇಳಿಸುತ್ತಿದೆ. ಈ ತಿಂಗಳು, ಮುಂದಿನ ತಿಂಗಳು ಎಂದು ತಿಳಿಸುತ್ತಾರೆ; ಯಾರು ಸಚಿವರಾಗಬೇಕು ಎನ್ನುತ್ತಾರೋ ಅವರ ಮೂಗಿಗೆ ತುಪ್ಪ ಸವರುತ್ತಾರೆ. ಯಾರು ವ್ಯತ್ಯಾಸ ಮಾಡುತ್ತಾರೋ ಅವರನ್ನು ತೆಗೆಯುತ್ತೇವೆ ಎನ್ನುತ್ತಾರೆ. ಇವೆರಡು ವಿಚಾರಗಳನ್ನು ಇಟ್ಟುಕೊಂಡು ಒಂದು ವರ್ಷದಿಂದ ಕಾಲಹರಣ ಮಾಡಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ದೂರಿದರು.
ಬಿಜೆಪಿ ಹೋರಾಟದ ಬಳಿಕ ವೈಮಾನಿಕ ಸರ್ವೇ
ಅಭಿವೃದ್ಧಿ ಎಂದರೆ ಇಷ್ಟೇ ಎಂದು ತಿಳಿದಿದ್ದಾರೆ. ಅತಿವೃಷ್ಟಿ ಆಯಿತು; ನಾವು ಬೀದಿಗಿಳಿದು ಹೋರಾಟ ಮಾಡಬೇಕಾಯಿತು. ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ, ನಾನು, ವಿಪಕ್ಷದ ಮತ್ತೊಬ್ಬ ನಾಯಕ ಅಶೋಕ್, ಇನ್ನೂ ಹಲವು ಮುಖಂಡರು ಬೆಳೆಹಾನಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ ಬಗ್ಗೆ ಗಮನ ಸೆಳೆದಾಗ ಸರಕಾರ ತಲೆ ಕೆಡಿಸಿಕೊಳ್ಳಲಿಲ್ಲ; ನಾವು ಬೀದರ್ನಿಂದ ಹೋರಾಟ ಪ್ರಾರಂಭಿಸಿದ ಮೇಲೆ ವೈಮಾನಿಕ ಸರ್ವೇ ಮಾಡಲು ಹೊರಟರು. ಹಳ್ಳಗಳಿಂದ ರಸ್ತೆ ಸಂಚಾರ ನಿಷೇಧವಾಗುವಂತಿತ್ತು. ಅದಕ್ಕಾಗಿಯೇ ಅವರು ವೈಮಾನಿಕ ಸಮೀಕ್ಷೆ ಮಾಡಿದರು ಎಂದು ವ್ಯಂಗ್ಯವಾಗಿ ತಿಳಿಸಿದರು.
ಪರಿಹಾರ ಘೋಷಣೆ ಮಾಡಿದರು. ಆದರೆ, ರೈತರಿಗೆ ಒಂದು ನಯಾಪೈಸೆ ಸಿಕ್ಕಿಲ್ಲ; ಘೋಷಣೆ ಮಾತ್ರ ನಡೆದಿದೆ ಎಂದು ಟೀಕಿಸಿದರು. ಕೇವಲ ಘೋಷಣೆ ಮಾಡಿದ್ದರಿಂದ ಯಾರ ಹೊಟ್ಟೆಯೂ ತುಂಬುವುದಿಲ್ಲ. ಪರಿಹಾರವನ್ನು ಅವರಿಗೆ ಕೊಡಬೇಕು ಎಂದು ಆಗ್ರಹಿಸಿದರು.
ಸರಕಾರದ ಹಣ ಎಲ್ಲಿ ಹೋಗುತ್ತಿದೆ?
ಗ್ಯಾರಂಟಿ ಕೊಟ್ಟಿದ್ದಾಗಿ ಹೇಳುತ್ತಾರೆ; ಆರು ತಿಂಗಳಿಗೊಮ್ಮೆ, ಮೂರು ತಿಂಗಳಿಗೆ ಒಮ್ಮೆ ಕೊಡುತ್ತಾರೆ. ಜನರು ಕಾಯುತ್ತಲೇ ಇರುವಂತಾಗಿದೆ. ಹಾಗಿದ್ದರೆ ಹಣ ಎಲ್ಲಿ ಹೋಗುತ್ತಿದೆ? ಇದು ಲೆಕ್ಕಕ್ಕೆ ಸಿಗದ ಪರಿಸ್ಥಿತಿ ರಾಜ್ಯದ್ದು ಎಂದು ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದರು.
ಬೆಳಗಾವಿ ಭಾಗದಲ್ಲಿ ಪ್ರತ್ಯೇಕ ರಾಜ್ಯದ ಧ್ವನಿ
ಪ್ರತಿ ಜಿಲ್ಲೆಯಲ್ಲೂ ಅಭಿವೃದ್ಧಿ ಆಗಬೇಕು. ಕೇವಲ ಬೆಂಗಳೂರು ಅಭಿವೃದ್ಧಿ ಎಂದರೆ ಕರ್ನಾಟಕದ ಅಭಿವೃದ್ಧಿಯಲ್ಲ; ಇದನ್ನು ಮೊದಲಿನಿಂದಲೂ ಹೇಳಿದ್ದೇನೆ. 371 ಜೆ ಬರುವ ವರೆಗೆ, ಕೆಕೆಆರ್ಡಿಬಿಗೆ ವಿಶೇಷ ಅನುದಾನ ಕೊಡುವವರೆಗೆ ನಮಗೆ ಪ್ರತ್ಯೇಕ ರಾಜ್ಯ ಬೇಕೆಂಬ ಒಂದು ಧ್ವನಿ ಗುಲ್ಬರ್ಗದಿಂದ ಬರುತ್ತಿತ್ತು. ಈಗ ಬೆಳಗಾವಿ ಭಾಗದಲ್ಲಿ ಅಂಥ ಮಾತುಗಳು ಬರುತ್ತಿದೆ. ಕಾಂಗ್ರೆಸ್ಸಿನವರೇ ಅವರ ಸರಕಾರದ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಗಮನ ಸೆಳೆದರು.