ಕಲಬುರ್ಗಿ, ಜು 04 (Daijiworld News/MSP): ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮೋದಿ ಹೆಸರು ಹೇಳದೆ ಉತ್ತಮವಾಗಿ ಕೆಲಸ ಮಾಡಿ ಆ ಬಳಿಕ ವೋಟ್ ಕೇಳಿ ಎಂದು ಬಿಜೆಪಿ ಸಂಸದರ ವಿರುದ್ದ ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.
ಕಲಬುರ್ಗಿಯ ಅಫಜಲಪುರ ತಾಲೂಕಿನ ಮಣ್ಣೂರು ಗ್ರಾಮದಲ್ಲಿ ನಡೆದ ಜು. 1 ರ ವಿರಾಟ್ ಹಿಂದು ಮಹಾಸಮಾವೇಶ ನಡೆಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮುತಾಲಿಕ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡಿ ಹಾಗೂ ಹಿಂದುತ್ವದ ಹೆಸರಿನಲ್ಲಿ ಬಿಜೆಪಿ ಸಂಸದರಿಗೆ ಮತದಾರರು ಮತ ಹಾಕಿದ್ದಾರೆ. ಹೀಗಾಗಿ ನೀವೆಲ್ಲಾ ಐದು ವರ್ಷ ಬಾಯಿ ಮುಚ್ಚಿಕೊಂಡು ಕೆಲಸ ಮಾಡಿ. ಮುಂದಿನ ಬಾರಿ ಚುನಾವಣೆಗೆ ಬರುವಾಗ ಮೋದಿ ಹೆಸರು ಬಳಸದಂತೆ ಮತ ಕೇಳಿ ಎಂದು ಹೇಳಿದ್ದಾರೆ. ಸದ್ಯ ಮುತಾಲಿಕ್ ಭಾಷಣದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಹಿಂದೆಯೂ ಬಿಜೆಪಿ ಸಂಸದರ ಮೇಲೆ ಚಿಂತಕ ಚಕ್ರವರ್ತಿ ಸೂಲಿಬೆಲೆ ಕಿಡಿಕಾರಿದ್ದರು. ನಾಲ್ಕು ಲಕ್ಷ ಮತಗಳ ಅಂತರದಿಂದ ಗೆದ್ದವರೂ ನಲವತ್ತೇ ಸಾವಿರ ಮತಗಳ ಅಂತರದಿಂದ ಗೆದ್ದವರು ಎಲ್ಲರೂ ಮೋದಿ ಮತಭಿಕ್ಷೆಯ ಫಲಾನುಭವಿಗಳೇ ಇದನ್ನು ತಿಳಿದುಕೊಂಡು ಸಂಸದರು ಕೆಲಸ ಮಾಡಬೇಕು ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಬಿಜೆಪಿ ಸಂಸದರ ವಿರುದ್ಧ ಚಾಟಿ ಬೀಸಿದ್ದರು.