ಚಂಡಿಗಢ, ನ. 23 (DaijiworldNews/AA): ಕೇಂದ್ರ ಸರ್ಕಾರ ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢವನ್ನು ಸಂವಿಧಾನದ 240 ನೇ ವಿಧಿಯ ವ್ಯಾಪ್ತಿಗೆ ಸೇರಿಸಲು ಪ್ರಸ್ತಾಪಿಸಿದೆ. ಈ ಹಿನ್ನೆಲೆ 131ನೇ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಪ್ರಸ್ತುತಪಡಿಸಿದೆ. ಕೇಂದ್ರದ ಈ ನಡೆಗೆ ಪಂಜಾಬ್ ರಾಜಕೀಯ ಪಕ್ಷಗಳು ತೀವ್ರವಾಗಿ ವಿರೋಧ ವ್ಯಕ್ತಪಡಿಸಿವೆ.

ಕೇಂದ್ರ ಸರ್ಕಾರ ಪಂಜಾಬ್ ನಗರದ ಮೇಲಿನ ದೀರ್ಘಕಾಲದ ಹಕ್ಕನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಪಂಜಾಬ್ನಾದ್ಯಂತ ಎಎಪಿ, ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿ ದಳದಂತಹ ರಾಜಕೀಯ ಪಕ್ಷಗಳು ವಿರೋಧ ವ್ಯಕ್ತಪಡಿಸಿದೆ. ಆದರೆ ಬಿಜೆಪಿ ಪಕ್ಷದ ನಾಯಕರು ಕೇಂದ್ರದ ಈ ನಡೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
ಡಿಸೆಂಬರ್ 1 ರಿಂದ ಪ್ರಾರಂಭವಾಗುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಪಟ್ಟಿ ಮಾಡಲಾಗಿರುವ ಸಂವಿಧಾನ (131 ನೇ ತಿದ್ದುಪಡಿ) ಮಸೂದೆ 2025 ಚಂಡೀಗಢಕ್ಕೆ ನಿಯಮಗಳನ್ನು ಮಾಡಲು ಮತ್ತು ಸ್ವತಂತ್ರ ಆಡಳಿತಗಾರರನ್ನು ನೇಮಿಸಲು ರಾಷ್ಟ್ರಪತಿಗಳಿಗೆ ಅಧಿಕಾರ ನೀಡುತ್ತದೆ.
ಸಂವಿಧಾನದಲ್ಲಿ ಆರ್ಟಿಕಲ್ 240 ಅಡಿಯಲ್ಲಿ ಕೇಂದ್ರಾಡಳಿತ ಪ್ರದೇಶಗಳ ಆಡಳಿತ ವ್ಯವಹಾರ ನೇರವಾಗಿ ರಾಷ್ಟ್ರಪತಿಗಳ ನಿಯಂತ್ರಣದಲ್ಲಿ ಇರುತ್ತದೆ. ಇಲ್ಲಿ ರಾಷ್ಟ್ರಪತಿಗಳು ನೇರವಾಗಿ ಕಾನೂನುಗಳನ್ನು ರೂಪಿಸಿ ಜಾರಿಗೆ ತರಬಹುದಾಗಿದೆ. ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ನಿಕೋಬಾರ್, ಲಕ್ಷದ್ವೀಪ್, ಪುದುಚೇರಿ, ದಾದ್ರ ಮತ್ತು ನಾಗರ್ ಹವೇಲಿ, ದಮನ್ ಮತ್ತು ದಿಯು ಇವು ಆರ್ಟಿಕಲ್ 240 ಅಡಿಗೆ ಬರುತ್ತವೆ. ಆದರೆ, ಚಂಡೀಗಡವು ಕೇಂದ್ರಾಡಳಿತ ಪ್ರದೇಶವಾದರೂ ಆರ್ಟಿಕಲ್ 240ಕ್ಕೆ ಒಳಪಡುವುದಿಲ್ಲ.