ಚಿಕ್ಕಬಳ್ಳಾಪುರ, ನ. 24 (DaijiworldNews/TA): ಜಿಲ್ಲೆಯ ಶಿಡ್ಲಘಟ್ಟದಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜಂಟಿಯಾಗಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ರಾಜಕೀಯ ಚಟುವಟಿಕೆ ಜೋರಾಗಿದ್ದು, ಕಾರ್ಯಕರ್ತರ ಸಂಚಾರ ಹೆಚ್ಚಾಗಿದೆ. ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಬೈಕ್ನಲ್ಲಿ ಆಗಮಿಸುವವರಿಗಾಗಿ ಕಾಂಗ್ರೆಸ್ ನಾಯಕರಿಂದ ಪ್ರತಿ ಬೈಕ್ಗೆ 2 ಲೀಟರ್ ಉಚಿತ ಪೆಟ್ರೋಲ್ ವಿತರಣೆ ಮಾಡಲಾಗುತ್ತಿದೆ.

ಇದಕ್ಕಾಗಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕೆ ತಲುಪಿದ್ದು, ಉಚಿತ ಪೆಟ್ರೋಲ್ ಪಡೆಯಲು ಸ್ಥಳದಲ್ಲಿ ದೀರ್ಘ ಸಾಲುಗಳು ಕಾಣಿಸಿಕೊಂಡಿವೆ. ಇಂದು ಬೆಳಿಗ್ಗೆ 11.30ಕ್ಕೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಶಿಡ್ಲಘಟ್ಟ ತಾಲೂಕಿನ ಹನುಮಂತಪುರಕ್ಕೆ ಆಗಮಿಸಲಿದ್ದು, ಹಲವು ಪ್ರಮುಖ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಉದ್ಘಾಟನೆ ಮತ್ತು ಶಂಕುಸ್ಥಾಪನೆಗೊಳ್ಳುವ ಅಭಿವೃದ್ಧಿ ಕಾಮಗಾರಿಗಳು :
ಸರ್ಕಾರಿ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆ – ಶಂಕುಸ್ಥಾಪನೆ
ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕ್ಯಾಂಪಸ್ ಕಟ್ಟಡ – ಉದ್ಘಾಟನೆ
ಒಟ್ಟು 2000 ಕೋಟಿ ರೂ. ಮೌಲ್ಯದ 28 ಇಲಾಖೆಗಳ 947 ಅಭಿವೃದ್ಧಿ ಯೋಜನೆಗಳಿಗೆ ಚಾಲನೆ
ಶಿಡ್ಲಘಟ್ಟದಲ್ಲಿ ನಡೆಯುತ್ತಿರುವ ಈ ಭಾರಿ ಮಟ್ಟದ ಕಾರ್ಯಕ್ರಮ ಜಿಲ್ಲೆಯಲ್ಲಿ ರಾಜಕೀಯ ಉತ್ಸಾಹವನ್ನು ಹೆಚ್ಚಿಸಿದೆ. ಹಲವು ಇಲಾಖೆಗಳ ಯೋಜನೆಗಳಿಗೆ ಚಾಲನೆ ದೊರಕುತ್ತಿರುವುದರಿಂದ, ಈ ಭೇಟಿ ಚಿಕ್ಕಬಳ್ಳಾಪುರ ಜಿಲ್ಲೆಯ ಅಭಿವೃದ್ಧಿಗೆ ಹೊಸ ದಿಕ್ಕನ್ನು ನೀಡಲಿದೆ ಎಂದು ಸ್ಥಳೀಯರು ನಿರೀಕ್ಷಿಸುತ್ತಿದ್ದಾರೆ.