ಚಿಕ್ಕಮಗಳೂರು, ನ. 24 (DaijiworldNews/TA): ಜಿಲ್ಲೆಯ ಅಜ್ಜಂಪುರದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅರಣ್ಯ ಸಚಿವ ಈಶ್ವರ ಖಂಡ್ರೆ, ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಕಾಳಿಂಗ ಸರ್ಪಗಳನ್ನು ಸೆರೆ ಹಿಡಿಯಲು ವಿಶೇಷ ತಂಡ ರಚಿಸುವಂತೆ ಸೂಚನೆ ನೀಡಿದ್ದಾರೆ. ಅವರು ಸೂಚಿಸಿರುವಂತೆ, ಸರ್ಪಗಳನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲು ಯಾವುದೇ ಖಾಸಗಿ ಸಂಸ್ಥೆಗಳ ನೆರವಿಗೆ ಅವಶ್ಯಕತೆ ಇಲ್ಲದೆ, ಅರಣ್ಯ ಇಲಾಖೆಯ 5 ಸಿಬ್ಬಂದಿಗೆ ತರಬೇತಿ ನೀಡುವಂತೆ ನಿರ್ದೇಶಿಸಲಾಗಿದೆ.

ಚಿಕ್ಕಮಗಳೂರು, ಉತ್ತರ ಕನ್ನಡ, ಶಿವಮೊಗ್ಗ ಮತ್ತು ಉಡುಪಿ ಭಾಗಗಳಲ್ಲಿ ಜನವಸತಿ ಪ್ರದೇಶಗಳಲ್ಲಿ, ಮನೆಯೊಳಗೆ ಮತ್ತು ತೋಟಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಕಾಳಿಂಗ ಸರ್ಪಗಳು ಸಾರ್ವಜನಿಕರಲ್ಲಿ ಭಯ ಮೂಡಿಸುತ್ತಿವೆ. ಇದನ್ನು ಪರಿಹರಿಸಲು ಉರಗ ತಜ್ಞರು ಅಥವಾ ಖಾಸಗಿ ಸಂಸ್ಥೆಗಳ ನೆರವಿನ ಅಗತ್ಯವಿಲ್ಲ, ನಮ್ಮದೇ ಅರಣ್ಯಾಧಿಕಾರಿಗಳ ತಂಡಕ್ಕೆ ತರಬೇತಿ ನೀಡಿ, ಪ್ರಾದೇಶಿಕ ಅರಣ್ಯಾಧಿಕಾರಿಯ ನೇತೃತ್ವದಲ್ಲಿ 5 ಜನರ ತಂಡವನ್ನು ರಚಿಸಬೇಕು ಎಂದು ಈಶ್ವರ ಖಂಡ್ರೆ ಹೇಳಿದ್ದಾರೆ.
ವಾಣಿಜ್ಯ ಚಟುವಟಿಕೆಗಳು ಮತ್ತು ಸಂಶೋಧನಾ ಅನುಮತಿಗಳ ದುರುಪಯೋಗದ ಆರೋಪವೂ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಅರಣ್ಯ ಸಚಿವರು ಕಾಳಿಂಗ ಸರ್ಪಗಳನ್ನು ಸುರಕ್ಷಿತವಾಗಿ ಸೆರೆ ಹಿಡಿಯಲು ಮತ್ತು ಪರಿಸರ ಸಂರಕ್ಷಣೆಗೆ ನೆರವಾಗಲು ಅರಣ್ಯಾಧಿಕಾರಿಗಳ ತಂಡ ರಚನೆಗೆ ಮುಂದಾಗಿದ್ದಾರೆ. ಈ ನಿರ್ಧಾರದಿಂದ ಸಾರ್ವಜನಿಕರ ಭದ್ರತೆ, ಸರ್ಪಗಳ ಸುರಕ್ಷತೆ ಮತ್ತು ಪರಿಸರ ಸಂರಕ್ಷಣೆಗೆ ಸಹಾಯಕವಾಗಲಿದೆ ಎಂಬ ನಿರೀಕ್ಷೆ ವ್ಯಕ್ತಪಡಿಸಲಾಗಿದೆ.